Bhadra Left Bank Canal Tragedy: One Body Recovered, Three Family Members Still Missing
One body recovered after four members of a family were swept away in the Bhadra Left Bank Canal near Bhadravati. Search for three others continues.
ಹೊಳೆಹೊನ್ನೂರು: ಬಟ್ಟೆ ತೊಳೆಯಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಭದ್ರಾ ಎಡದಂಡೆ ನಾಲೆಗೆ ಬಿದ್ದು ನೀರುಪಾಲಾದ ಪೈಕಿ ಶೋಧ ಕಾರ್ಯದ ವೇಳೆ ಓರ್ವನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿಯಲಿದೆ.
ಒಂದೇ ಕುಟುಂಬದ ನೀಲಾಬಾಯಿ, ಅವರ ಪುತ್ರ ರವಿಕುಮಾರ್, ಪುತ್ರಿ ಶ್ವೇತಾ ಹಾಗೂ ಅಳಿಯ ಪರಶುರಾಮ್ ಭಾನುವಾರ ನಾಪತ್ತೆಯಾಗಿದ್ದರು.ಶೋಧ ಕಾರ್ಯಾಚರಣೆಯಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿದೆ.
ಈ ದುರ್ಘಟನೆಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ನೀರುಪಾಲಾಗಿದ್ದು, ತಾಯಿ, ಮಗ, ಮಗಳು ಹಾಗೂ ಅಳಿಯ ಸೇರಿದ್ದಾರೆ. ಸುಮಾರು 27 ಗಂಟೆಗಳ ಹಿಂದೆ ಘಟನೆ ಸಂಭವಿಸಿದ್ದು, ಕಳೆದ 24 ಗಂಟೆಗಳ ಕಾಲ ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಕಾರದಿಂದ ಶೋಧ ಕಾರ್ಯ ನಡೆಯಿತು.
ಇಂದು ಬೆಳಗ್ಗಿನಿಂದ ಭದ್ರಾ ಎಡದಂಡೆ ನಾಲೆಯಲ್ಲಿ ಅಗ್ನಿಶಾಮಕ ದಳದ ಎಎಸ್ಒ ಹುಲಿಯಪ್ಪ ಹಾಗೂ ಈಶ್ವರ್ ಮಲ್ಪೆ ಅವರ ನೇತೃತ್ವದಲ್ಲಿ ಸುಮಾರು 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ನಡೆಸಲಾಯಿತು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ, ನಿನ್ನೆ ನೀರುಪಾಲಾದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ರವಿ ಎಂಬಾತನ ಮೃತದೇಹ ಪತ್ತೆಯಾಗಿದೆ.
ನಿನ್ನೆ ಇದೇ ಪ್ರದೇಶದಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಇಂದಿನ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ನಾಪತ್ತೆಯಾದವರ ಪತ್ತೆಗೆ ನಾಳೆ ಮತ್ತೆ ಶೋಧ ಕಾರ್ಯ ಆರಂಭಿಸಲಾಗುತ್ತದೆ.
ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
About The Author
ನಮಸ್ಕಾರ, ನಾನು ರಫಿ ರಿಪ್ಪನ್ಪೇಟೆ.
’ಪೋಸ್ಟ್ಮ್ಯಾನ್ ನ್ಯೂಸ್’ ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. “ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು” ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್ಮ್ಯಾನ್ ನ್ಯೂಸ್.
ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, ‘ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ’. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್ಮ್ಯಾನ್ ನ್ಯೂಸ್.”
ಇಲ್ಲಿ ‘ಸುದ್ದಿ’ ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: “ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ.”
ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ.
’ಪೋಸ್ಟ್ಮ್ಯಾನ್ ನ್ಯೂಸ್’ ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ ‘ಸೇತುವೆ’ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ.
ನಮ್ಮ ಅಂತಿಮ ಗುರಿ ಒಂದೇ — “ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು.”
ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ.
ಸ್ನೇಹಪೂರ್ವಕವಾಗಿ,
ರಫಿ ರಿಪ್ಪನ್ಪೇಟೆ
ಸಂಪಾದಕರು, ಪೋಸ್ಟ್ಮ್ಯಾನ್ ನ್ಯೂಸ್
🌐 [www.postmannewskannada.com]