ಶಿಗ್ಗಾವಿಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದೇಶ, ಭಾಷೆ, ಪರಿಸರ ರಕ್ಷಣೆಯ ಮಹತ್ವದ ಕುರಿತು ಕೆಡಬ್ಲ್ಯುಜೆ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಗ್ಗಾವಿಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ: ದೇಶ–ನುಡಿ–ಪರಿಸರ ಸಂರಕ್ಷಣೆಯಲ್ಲೇ ವ್ಯಕ್ತಿತ್ವ ವಿಕಾಸ – ವಿಶ್ವನಾಥ ಬಂಡಿವಡ್ಡರ
ಬಂಕಾಪುರ್: ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, “ಕೇವಲ ವಿದ್ಯಾವಂತರಾಗುವುದೇ ಸಾಕಾಗುವುದಿಲ್ಲ. ದೇಶ, ಭಾಷೆ, ಪರಿಸರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಸಾಧ್ಯ” ಎಂದು ಹೇಳಿದರು.

ಪಟ್ಟಣದ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಂಪಿಎಂ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹನುಮಂತಗೌಡ್ರ ಪಾಟೀಲ ಹಾಗೂ ಗುರುಶಾಂತಪ್ಪ ಲಕ್ಷ್ಮೇಶ್ವರ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಗರಿಕತೆ ಬೆಳೆದಂತೆ ವೈಚಾರಿಕತೆಯೂ ಬೆಳೆಯುತ್ತಿದೆ. ತಾಲೂಕಾ ಕಸಾಪ ವತಿಯಿಂದ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ಕೇವಲ ನೆಪವಲ್ಲ, ಸಮಾಜದ ಸ್ವಾಸ್ಥ್ಯ ಕಾಪಾಡುವ ಹಾಗೂ ಸಮಾಜವನ್ನು ತಿದ್ದುವ ಮಹತ್ವದ ಪ್ರಯತ್ನಗಳಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಗ್ಗಾವಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿನೋದ ಪಾಟೀಲ ಅವರು “ಕನ್ನಡ ನಾಡು – ನುಡಿ ಚಿಂತನೆ” ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂಪತ್ತನ್ನು ಸಮಾಜಕ್ಕಾಗಿ ವಿನಿಯೋಗಿಸುವವರು ಕಡಿಮೆ, ಆದರೆ ದತ್ತಿ ಉಪನ್ಯಾಸಗಳಂತಹ ಕಾರ್ಯಕ್ರಮಗಳು ಸ್ಮರಣೀಯ ಕಾರ್ಯಗಳಾಗಿವೆ ಎಂದರು. ಸಂತ–ಶರಣರ ನಾಡು, ಸರ್ವಧರ್ಮ ಸಮನ್ವಯದ ಭೂಮಿಯಲ್ಲಿ ನಾವು ಬದುಕುತ್ತಿರುವುದು ನಮ್ಮ ಹೆಮ್ಮೆ. ಪ್ರಾಚೀನ ಭಾಷೆಗಳಲ್ಲೊಂದು ಕನ್ನಡವಾಗಿದ್ದು, ಅದರದೇ ಆದ ಶ್ರೀಮಂತ ಇತಿಹಾಸವಿದೆ. 12ನೇ ಶತಮಾನದ ಅಣ್ಣ ಬಸವಣ್ಣನವರ ವಚನಗಳಲ್ಲಿ ಇಂದಿನ ಕಾನೂನಿನ ಅರ್ಥ ಅಡಗಿದೆ. “ಆಡು ಮುಟ್ಟದ ಸೊಪ್ಪಿಲ್ಲ, ಸಾಹಿತ್ಯ ಮುಟ್ಟದ ಕ್ಷೇತ್ರವೇ ಇಲ್ಲ” ಎಂಬಂತೆ ಸಾಮಾಜಿಕ ಶಾಂತಿ ಕನ್ನಡ ಸಾಹಿತ್ಯದಲ್ಲೇ ಅಡಗಿದೆ ಎಂದು ಹೇಳಿದರು. ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನೆಲ–ಜಲ–ನುಡಿಯನ್ನು ಕಾಪಾಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ ಎಂದರು.
ಶಹರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಲಲಿತಾ ಹಿರೇಮಠ, ಎಂಪಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೇವರಾಜ ಸುಣಗಾರ ಮಾತನಾಡಿದರು. ನಿಖಿತಾ ಕಂಕಣವಾಡ ಪ್ರಾಸ್ತಾವಿಕ ಭಾಷಣ ಮಾಡಿದರು.
ಎಂಪಿಎಂ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮೊರಬದ ಅಧ್ಯಕ್ಷತೆ ವಹಿಸಿದ್ದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಬಸವರಾಜ ಹೆಸರೂರ, ಸುಶೀಲಕ್ಕ ಪಾಟೀಲ, ಎಂ.ಎಂ. ದೇವಕ್ಕಿಗೌಡ್ರ, ಐಶ್ವರ್ಯ ಲಕ್ಷ್ಮೇಶ್ವರ, ಮುಖ್ಯ ಶಿಕ್ಷಕಿ ಅನಿತಾ ಹಿರೇಮಠ ಸೇರಿದಂತೆ ಶಿಕ್ಷಕರು, ಸಾಹಿತ್ಯಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಸ್ವಪ್ನಾ ಪಠ್ಯೆ ಸ್ವಾಗತಿಸಿದರು, ಶಿಕ್ಷಕಿ ಸವಿತಾ ಗೌರಿಮಠ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ – ಬಂಕಾಪುರ್

