ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ : ಹರತಾಳು ಹಾಲಪ್ಪ ವ್ಯಂಗ್ಯ
ಸಾಗರ: “ಅಧಿಕಾರ ಉಳಿಸಿಕೊಳ್ಳಲು ಸರ್ಕಾರ ಶಾಸಕರ ಖರೀದಿ ಕೇಂದ್ರ ಪ್ರಾರಂಭಿಸಿದೆ. ಆದರೆ ರೈತರಿಗಾಗಿ ಮೆಕ್ಕೆಜೋಳ–ಭತ್ತ ಖರೀದಿ ಕೇಂದ್ರ ಆರಂಭಿಸಲು ಮಾತ್ರ ಸಮಯವಿಲ್ಲ,” ಎಂದು ಮಾಜಿ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.
ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಬಲಬೆಲೆಗೆ ಭತ್ತ ಮತ್ತು ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಆರಂಭಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಕಂಡುಬಂದಿದೆ ಎಂದು ಅವರು ಆರೋಪಿಸಿದರು.
ಕಬ್ಬು ಬೆಳೆಗಾರರಿಗೆ ಘೋಷಿಸಿದ ದರ ಹೆಚ್ಚಳ ಇನ್ನೂ ಜಾರಿಯಾಗಿಲ್ಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ದಾವಣಗೆರೆಯಲ್ಲಿ ಪ್ರತಿಭಟನೆ ನಡೆದರೂ ಮೆಕ್ಕೆಜೋಳ ಖರೀದಿ ಪ್ರಾರಂಭವಾಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಸಹ ಭತ್ತ–ಮೆಕ್ಕೆಜೋಳ ಖರೀದಿ ಇನ್ನೂ ಆರಂಭವಾಗಿಲ್ಲ. ಶಾಸಕ–ಮಂತ್ರಿಗಳು ಮೌನವಾಗಿದ್ದಾರೆ,” ಎಂದರು.
ಸಾಗರ ತಾಲೂಕಿನಲ್ಲಿ ಬಗರ್‌ಹುಕುಂ ರೈತರಿಗೆ ನೀಡಲಾಗುತ್ತಿರುವ ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ ಅವರು, ಕೆರೆಹಳ್ಳಿ ಹೋಬಳಿಯಲ್ಲಿ ಮತ್ತೆ ಆನೆಹಾವಳಿ ಹೆಚ್ಚಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ನೆರೆಪೀಡಿತರಿಗೆ 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಸರ್ಕಾರ ನೀಡುತ್ತಿರುವ 1.20 ಲಕ್ಷ ರೂ. ಅನುದಾನ ಮನೆಯ ಕಾರ್ಮಿಕರಿಗೂ ಸಾಲದು. “ಇದೀಗದ ದುಬಾರಿ ಪರಿಸ್ಥಿತಿಯಲ್ಲಿ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು,” ಎಂದು ಹಾಲಪ್ಪ ಆಗ್ರಹಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ರೈತರ ಸಮಸ್ಯೆ ಮತ್ತು ರೈತ ವಿರೋಧಿ ನೀತಿಗಳ ವಿರುದ್ಧ ನವೆಂಬರ್ 29ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿರುವುದಾಗಿ ತಿಳಿಸಿ, ರೈತರು–ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಗಿರೀಶ್ ಹಕ್ರೆ, ಪ್ರಮುಖರಾದ ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ರಮೇಶ್ ಹಾರೆಗೊಪ್ಪ, ಗಿರೀಶ್ ಗೌಡ, ಕೊಟ್ರಪ್ಪ ನೇದರವಳ್ಳಿ, ರವೀಂದ್ರ, ನಾರಾಯಣಪ್ಪ, ಸುಜಯ್, ಜಿ.ಕೆ.ಭೈರಪ್ಪ, ಹರೀಶ್, ಗುರು ಇನ್ನಿತರರು ಉಪಸ್ಥಿತರಿದ್ದರು.

