ಮೈಸೂರು ಯುವ ದಸರಾ ಕವಿಗೋಷ್ಠಿಯಲ್ಲಿ ಮೊಳಗಲಿದೆ ಮಲೆನಾಡಿನ ದನಿ: ಡಾ. ಕೆ. ಶ್ರೀಪತಿ ಹಳಗುಂದ ಅವರ ಸಾಹಿತ್ಯ ಸಾಧನೆಗೊಂದು ಪ್ರತಿಷ್ಠಿತ ಗರಿ! | Dr. K. Sripathi Halagunda, Head of the Kannada Department at Government First Grade College, Hosanagara, will recite poetry at the Mysuru Dasara Yuva Dasara Kavigoshti, highlighting Malnad’s literary talent.
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ‘ಯುವ ದಸರಾ ಕವಿಗೋಷ್ಠಿ’ಯಲ್ಲಿ ಕವಿತೆ ವಾಚಿಸುವ ಮೂಲಕ ಮಲೆನಾಡಿನ ಹೊಸನಗರದ ಪ್ರತಿಭೆಯೊಂದು ನಾಡಿನ ಗಮನ ಸೆಳೆಯುತ್ತಿದೆ.
ಹೊಸನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಕೆ. ಶ್ರೀಪತಿ ಹಳಗುಂದ ಅವರಿಗೆ ಲಭಿಸಿರುವ ಈ ಅವಕಾಶ ಕೇವಲ ಅವರಿಗಷ್ಟೇ ಅಲ್ಲ, ಇಡೀ ಮಲೆನಾಡಿನ ಸಾಹಿತ್ಯಾಸಕ್ತರಿಗೆ ಹೆಮ್ಮೆಯ ಹಾಗೂ ಸ್ಫೂರ್ತಿದಾಯಕ ಸಂಗತಿಯಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಳಗುಂದ ಗ್ರಾಮದ ಕೃಷ್ಣಪ್ಪಗೌಡ ಮತ್ತು ಗಂಗಮ್ಮ ದಂಪತಿಯ ಪುತ್ರರಾಗಿರುವ ಇವರು, ಅಕ್ಷರ ಲೋಕದಲ್ಲಿ ನಡೆದುಬಂದ ಹಾದಿ ಯುವಜನತೆಗೆ ಅತ್ಯುತ್ತಮ ಮಾದರಿ. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸಾಗಿಸುವ ಛಲದಿಂದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ (ಎಂ.ಎ) ಪ್ರಥಮ ರ್ಯಾಂಕ್ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದು ತಮ್ಮ ಜ್ಞಾನದ ಹಸಿವನ್ನು ನೀಗಿಸಿಕೊಂಡಿದ್ದಾರೆ. ಕತೆ, ಕವಿತೆ, ವಿಮರ್ಶೆ, ಪ್ರಬಂಧ, ಸಂಶೋಧನೆ, ನಾಟಕ ಹಾಗೂ ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಮೂವತ್ತಕ್ಕೂ ಹೆಚ್ಚು ಶ್ರೇಷ್ಠ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಕೀರ್ತಿ ಇವರದ್ದು.
ಇವರ ಸಾಹಿತ್ಯದ ಕಂಪು ಕೇವಲ ನಾಡಿಗಷ್ಟೇ ಸೀಮಿತವಾಗಿಲ್ಲ; ಇವರ ಹಲವು ಕೃತಿಗಳು ಆಂಗ್ಲ ಹಾಗೂ ಮಲಯಾಳಂ ಭಾಷೆಗಳಿಗೂ ಅನುವಾದಗೊಂಡು ಗಡಿ ದಾಟಿ ಬೆಳೆದಿವೆ. ಮಂಗಳೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಇವರ ಕವಿತೆಗಳು ಪಠ್ಯವಾಗಿರುವುದು ಇವರ ಬರಹದ ಗಟ್ಟಿತನಕ್ಕೆ ಹಿಡಿದ ಕನ್ನಡಿ. ಆಕಾಶವಾಣಿ, ದೂರದರ್ಶನ ಮತ್ತು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಲೇಖನಗಳು, ಸಂದರ್ಶನಗಳು ಮತ್ತು ಅಂಕಣಗಳು ನಿರಂತರವಾಗಿ ಭಿತ್ತರಗೊಂಡು ಓದುಗರನ್ನು ತಲುಪುತ್ತಿವೆ.
ನಾಡಿನ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿರುವ ಡಾ. ಶ್ರೀಪತಿ ಅವರು, ಸಾವಿರಾರು ಉಪನ್ಯಾಸಗಳ ಮೂಲಕ ಯುವಜನರಲ್ಲಿ ಸ್ಫೂರ್ತಿಯ ಕಿಡಿ ಹೊತ್ತಿಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳು ಅಸಂಖ್ಯಾತ.
ಸದಾ ಕ್ರಿಯಾಶೀಲರಾಗಿರುವ ಇವರು ಪ್ರಸ್ತುತ ತಮ್ಮ ಪತ್ನಿ ಸುಪ್ರಿಯಾ, ಮಗ ಸುಶ್ರೀತ್ ಹಾಗೂ ಮಗಳು ಶ್ರೀಯಾ ಅವರೊಂದಿಗೆ ಕೋಣಂದೂರಿನಲ್ಲಿ ನೆಲೆಸಿದ್ದಾರೆ.
ಮೈಸೂರು ಯುವ ದಸರಾದಲ್ಲಿ ಕವನ ವಾಚಿಸಲಿರುವ ಇವರ ಸಾಹಿತ್ಯದ ಪಯಣ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಇವರ ಸಾಧನೆ ಮತ್ತಷ್ಟು ಯುವ ಪ್ರತಿಭೆಗಳಿಗೆ ದಾರಿದೀಪವಾಗಲಿ ಎಂದು ಹಾರೈಸೋಣ.
