w
Headlines
Home » ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ

IMG 20260828 WA0072

ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ

Farmers and agricultural workers will hold a padayatra and public meeting in Hosanagara on August 29 opposing the Kasturirangan report notification and proposed eco-sensitive zone.

ಶಿವಮೊಗ್ಗ: ರೈತರು ಹಾಗೂ ಕೃಷಿ ಕಾರ್ಮಿಕರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕವಿರುವ ಕಸ್ತೂರಿರಂಗನ್ ವರದಿ ಜಾರಿ ಅಧಿಸೂಚನೆಯನ್ನು ವಿರೋಧಿಸಿ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆ ವತಿಯಿಂದ ಆಗಸ್ಟ್ 29ರಂದು ಹೊಸನಗರದಲ್ಲಿ ಪಾದಯಾತ್ರೆ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಶ್ಚಿಮ ಘಟ್ಟ ರೈತ ಸಹಕಾರಿ ವೇದಿಕೆಯ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಪಾದಯಾತ್ರೆಯು ಬೆಳಿಗ್ಗೆ 9 ಗಂಟೆಗೆ ಕಾರಗಡಿಯ ಸಿದ್ಧಿವಿನಾಯಕ ದೇವಸ್ಥಾನದಿಂದ ಆರಂಭವಾಗಲಿದೆ. ಪಾದಯಾತ್ರೆ ಹೊಸನಗರ ತಲುಪಿದ ಬಳಿಕ ಬಹಿರಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.


ಕಸ್ತೂರಿರಂಗನ್ ವರದಿಯ 7ನೇ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕದ ಸುಮಾರು 20,668 ಚದರ ಕಿ.ಮೀ. ಮಲೆನಾಡು ಪ್ರದೇಶದ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಶಿಕಾರಿಪುರ ತಾಲ್ಲೂಕುಗಳ ಒಟ್ಟು 473 ಗ್ರಾಮಗಳನ್ನು ಪ್ರಸ್ತಾವಿತ ಸೂಕ್ಷ್ಮವಲಯಕ್ಕೆ ಸೇರಿಸಲಾಗಿದೆ. ಅಧಿಸೂಚನೆ ಜಾರಿಯಾದರೆ ಕಠಿಣ ಪರಿಸರ ಕಾಯ್ದೆಗಳಿಂದ ಗ್ರಾಮೀಣ ಜನಜೀವನ ಅಸ್ತವ್ಯಸ್ತವಾಗುವ ಆತಂಕವಿದೆ ಎಂದು ಮಂಜುನಾಥಗೌಡ ಹೇಳಿದರು.

ಇಡೀ ಗ್ರಾಮವನ್ನು ಸೂಕ್ಷ್ಮವಲಯಕ್ಕೆ ಸೇರಿಸುವುದಕ್ಕೆ ವಿರೋಧ

ಗ್ರಾಮಗಳ ವಸತಿ ಪ್ರದೇಶ, ಕೃಷಿಭೂಮಿ, ಪಟ್ಟಾಭೂಮಿ, ನೀರಿನ ಮೂಲಗಳು, ಗೋಮಾಳ, ಗ್ರಾಮ ರಸ್ತೆಗಳು ಸೇರಿದಂತೆ ವಿವಿಧ ಮೂಲಸೌಕರ್ಯ ಪ್ರದೇಶಗಳನ್ನು ಸೂಕ್ಷ್ಮವಲಯದಿಂದ ಹೊರಗಿಡದೆ ಇಡೀ ಗ್ರಾಮವನ್ನೇ ಸೂಕ್ಷ್ಮವಲಯವೆಂದು ಘೋಷಿಸುವ ಕ್ರಮ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಗ್ರಾಮಸಭೆಗಳಲ್ಲಿ ಚರ್ಚಿಸದೆ ಹಾಗೂ ಗ್ರಾಮಸ್ಥರ ಅಭಿಪ್ರಾಯಗಳನ್ನು ಪರಿಗಣಿಸದೆ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಸೂಕ್ಷ್ಮವಲಯದ ಗಡಿ ಹಾಗೂ ಸರಹದ್ದನ್ನು ಆಯಾ ಗ್ರಾಮದ ಜನರೇ ಗುರುತಿಸುವಂತಾಗಬೇಕು ಮತ್ತು ಅದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ರೈತರಿಗೆ ಆತಂಕ

ಸೂಕ್ಷ್ಮವಲಯವೆಂದು ಗುರುತಿಸಲಾಗುತ್ತಿರುವ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಕೃಷಿ ಮಾಡುತ್ತಿರುವ ಸಾವಿರಾರು ರೈತ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ದೊರೆತಿಲ್ಲ. ವಾಸವಿರುವ ಮನೆಗಳಿಗೂ ದಾಖಲೆಗಳು ಲಭ್ಯವಾಗಿಲ್ಲ.

ಅರ್ಜಿ ನಮೂನೆ 50, 53, 57 ಹಾಗೂ ಮನೆಗಳಿಗಾಗಿ 94C ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾಯುತ್ತಿರುವ ಕುಟುಂಬಗಳು, ಸೂಕ್ಷ್ಮವಲಯ ಘೋಷಣೆಯಿಂದ ತಾವು ವಾಸಿಸುತ್ತಿರುವ ಹಾಗೂ ಕೃಷಿ ಮಾಡುತ್ತಿರುವ ಜಾಗದ ಮೇಲಿನ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಮಂಜುನಾಥಗೌಡ ಹೇಳಿದರು.

ತಾಲ್ಲೂಕುವಾರು ಬಾಧಿತ ಗ್ರಾಮಗಳು

ತೀರ್ಥಹಳ್ಳಿ: 146 ಗ್ರಾಮಗಳು
ಸಾಗರ: 126 ಗ್ರಾಮಗಳು
ಹೊಸನಗರ: 125 ಗ್ರಾಮಗಳು
ಶಿವಮೊಗ್ಗ: 64 ಗ್ರಾಮಗಳು
ಶಿಕಾರಿಪುರ: 12 ಗ್ರಾಮಗಳು

ಸೂಕ್ಷ್ಮವಲಯ ಘೋಷಣೆಯಿಂದ ಕೃಷಿ, ತೋಟಗಾರಿಕೆ ಅಭಿವೃದ್ಧಿ, ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರವು ಗ್ರಾಮಸ್ಥರ ಬದುಕಿಗೆ ಮಾರಕವಾಗಬಾರದು ಎಂದು ಅವರು ಹೇಳಿದರು.

ಸೂಕ್ಷ್ಮವಲಯದ ಗಡಿ ಅಂತಿಮಗೊಳ್ಳುವ ಮೊದಲು ಗ್ರಾಮಸಭೆ, ರೈತರು, ಸಹಕಾರಿ ಸಂಸ್ಥೆಗಳು ಹಾಗೂ ಸ್ಥಳೀಯ ತಜ್ಞರ ಭಾಗವಹಿಸುವಿಕೆಯನ್ನು ಸರ್ಕಾರ ಖಚಿತಪಡಿಸಬೇಕು ಎಂದು ಆರ್.ಎಂ. ಮಂಜುನಾಥಗೌಡ ಒತ್ತಾಯಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.