Headlines

ಸರ್ಕಾರಿ ಉದ್ಯೋಗದ ಹೆಸರಲ್ಲಿ ಕೋಟಿ ಕೋಟಿ ವಂಚನೆ: ನಕಲಿ ನೇಮಕಾತಿ ಪತ್ರ ನೀಡಿ ಹಣ ದೋಚಿದ ದಂಪತಿ ಬಂಧನ

Screenshot 2026 07 03 10 16 35 555 com.miui.gallery edit

ಸರ್ಕಾರಿ ಉದ್ಯೋಗದ ಹೆಸರಲ್ಲಿ ಕೋಟಿ ಕೋಟಿ ವಂಚನೆ: ನಕಲಿ ನೇಮಕಾತಿ ಪತ್ರ ನೀಡಿ ಹಣ ದೋಚಿದ ದಂಪತಿ ಬಂಧನ

Shivamogga police arrested a couple for allegedly cheating job aspirants of over ₹2 crore by promising government jobs and issuing fake appointment letters using forged government documents.

ಶಿವಮೊಗ್ಗ, ಜುಲೈ 3: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ನಿರುದ್ಯೋಗಿ ಯುವಕ-ಯುವತಿಯರಿಂದ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ತಾಲೂಕಿನ ಹರಿಗೆ ಗ್ರಾಮದ ನಿವಾಸಿಗಳಾದ ಸಚಿನ್ ಹಾಗೂ ಸುಜಾತ ಎಂದು ಗುರುತಿಸಲಾಗಿದೆ.

ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಶಿವಮೊಗ್ಗದಲ್ಲಿ ಹೈಟೆಕ್ ಉದ್ಯೋಗ ತರಬೇತಿ ಕೇಂದ್ರ ಆರಂಭಿಸಿ, ಸರ್ಕಾರಿ ಉದ್ಯೋಗ ಪಡೆಯಲು ವಿಶೇಷ ಮಾರ್ಗದರ್ಶನ ನೀಡುವುದಾಗಿ ನಂಬಿಕೆ ಮೂಡಿಸುತ್ತಿದ್ದರು. ಬಳಿಕ ಶಿವಮೊಗ್ಗ ಮಾತ್ರವಲ್ಲದೆ ಹಾಸನ, ದಾವಣಗೆರೆ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸಿ ಹಣ ಪಡೆದುಕೊಂಡಿದ್ದಾರೆ.

ಉದ್ಯೋಗದ ಭರವಸೆಗೆ ಮರುಳಾದ ಅಭ್ಯರ್ಥಿಗಳಿಂದ ಕನಿಷ್ಠ ₹3.5 ಲಕ್ಷದಿಂದ ₹10 ಲಕ್ಷದವರೆಗೆ ಹಣ ಸಂಗ್ರಹಿಸಲಾಗಿದ್ದು, 50ಕ್ಕೂ ಹೆಚ್ಚು ಮಂದಿಗೆ ನಕಲಿ ನೇಮಕಾತಿ ಆದೇಶಗಳನ್ನು ನೀಡಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಒಟ್ಟು ವಂಚನೆಯ ಮೊತ್ತ ₹2 ಕೋಟಿಗೂ ಅಧಿಕ ಇರಬಹುದೆಂದು ಅಂದಾಜಿಸಲಾಗಿದೆ.

ಆರೋಪಿ ಸಚಿನ್ ತನ್ನ ತರಬೇತಿ ಕೇಂದ್ರದಲ್ಲೇ ಪರೀಕ್ಷೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ನಕಲಿ ಲೆಟರ್‌ಹೆಡ್, ಸೀಲು ಹಾಗೂ ದಾಖಲೆಗಳನ್ನು ಬಳಸಿ ಉದ್ಯೋಗ ದೊರೆತಿರುವಂತೆ ನಕಲಿ ನೇಮಕಾತಿ ಪತ್ರಗಳನ್ನು ನೀಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ವಂಚನೆ ಬಹಿರಂಗವಾಗುತ್ತಿದ್ದಂತೆ ಸಂತ್ರಸ್ತರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಸಚಿನ್ ಮತ್ತು ಸುಜಾತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.