ಮಣ್ಣಿನ ಮಡಿಕೆಯಲ್ಲಿ ಚಿನ್ನ ಸಿಕ್ಕಿದೆ ಎಂದು ನಂಬಿಸಿ ಲಕ್ಷಾಂತರ ರೂ. ವಂಚನೆ – ಪ್ರಕರಣ ದಾಖಲು
A private travels manager in Shivamogga was allegedly cheated of ₹10 lakh after fraudsters lured him with fake gold chains, claiming they had discovered 3 kg of gold during trench work in Vijayawada.
ಶಿವಮೊಗ್ಗ, ಜುಲೈ 3: ವಿಜಯವಾಡದಲ್ಲಿ ಟೆಲಿಫೋನ್ ಕೇಬಲ್ ಅಳವಡಿಸುವ ವೇಳೆ ಮಣ್ಣಿನ ಮಡಿಕೆಯಲ್ಲಿ ಮೂರು ಕೆಜಿ ಚಿನ್ನದ ಸರಗಳು ಸಿಕ್ಕಿವೆ ಎಂದು ನಂಬಿಸಿ, ಶಿವಮೊಗ್ಗದ ಖಾಸಗಿ ಟ್ರಾವೆಲ್ಸ್ ಸಂಸ್ಥೆಯ ಮ್ಯಾನೇಜರ್ಗೆ ₹10 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಕಳೆದ ಮೇ 10ರಿಂದ 20ರ ಅವಧಿಯಲ್ಲಿ ಗಣೇಶ್ ಎಂಬಾತ ಮ್ಯಾನೇಜರ್ ಅವರನ್ನು ಸಂಪರ್ಕಿಸಿ, ವಿಜಯವಾಡದಲ್ಲಿ ಟ್ರೆಂಚ್ ತೋಡುವ ವೇಳೆ ಮಣ್ಣಿನ ಮಡಿಕೆಯಲ್ಲಿ ಸುಮಾರು ಮೂರು ಕೆಜಿ ಚಿನ್ನದ ಸರಗಳು ದೊರೆತಿವೆ ಎಂದು ಹೇಳಿದ್ದಾನೆ. ತುರ್ತು ಹಣದ ಅಗತ್ಯವಿರುವುದರಿಂದ ಕಡಿಮೆ ಬೆಲೆಗೆ ಚಿನ್ನ ಮಾರಾಟ ಮಾಡುವುದಾಗಿ ನಂಬಿಸಿದ್ದಾನೆ.
ಮೇ 20ರಂದು ಶಿವಮೊಗ್ಗದ ಹಳೇ ಮಂಡ್ಲಿ ಪ್ರದೇಶದಲ್ಲಿ ಮ್ಯಾನೇಜರ್ ಅವರನ್ನು ಭೇಟಿಯಾದ ಗಣೇಶ್ ಹಾಗೂ ಆತನ ಇಬ್ಬರು ಸಹಚರರು ಎರಡು ಗ್ರಾಂ ತೂಕದ ಚಿನ್ನದ ಮಣಿಯನ್ನು ಮಾದರಿಯಾಗಿ ನೀಡಿದ್ದಾರೆ. ಅದನ್ನು ಪರೀಕ್ಷಿಸಿದಾಗ ಅದು ಅಸಲಿ ಚಿನ್ನವೆಂದು ದೃಢಪಟ್ಟಿದ್ದರಿಂದ ಆರೋಪಿಗಳ ಮೇಲೆ ಮ್ಯಾನೇಜರ್ಗೆ ನಂಬಿಕೆ ಬಂದಿದೆ.
ನಂತರ ತಮ್ಮ ಬಳಿ ಸದ್ಯ ₹10 ಲಕ್ಷ ಇರುವುದಾಗಿ ಮ್ಯಾನೇಜರ್ ತಿಳಿಸಿದ್ದು, ಅದಕ್ಕೆ ಪ್ರತಿಯಾಗಿ 1.5 ಕೆಜಿ ಚಿನ್ನ ನೀಡುವುದಾಗಿ ಆರೋಪಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದದಂತೆ ಹಳೇ ಮಂಡ್ಲಿ ಪ್ರದೇಶದಲ್ಲಿ ಹಣ ಪಡೆದು, ಚಿನ್ನವಿದೆ ಎಂದು ಹೇಳಿ ನೀಲಿ ಬಣ್ಣದ ಕವರ್ನ್ನು ನೀಡಿದ್ದಾರೆ.
ಆದರೆ ಮನೆಗೆ ಬಂದು ಕವರ್ ತೆರೆದು ನೋಡಿದಾಗ ಅದರಲ್ಲಿದ್ದ ಚಿನ್ನದ ಸರಗಳು ನಕಲಿ ಎಂಬುದು ತಿಳಿದುಬಂದಿದೆ. ವಂಚನೆಗೊಳಗಾದಿರುವುದು ಖಚಿತವಾದ ಬಳಿಕ ಮ್ಯಾನೇಜರ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.