Headlines

ಬಸ್ ನಿಲ್ದಾಣದಲ್ಲಿ ಕಂದಮ್ಮನನ್ನು ಬಿಸಾಡಿದ್ದ ಪೋಷಕರು ಅಂದರ್! ರಿಪ್ಪನ್‌ಪೇಟೆ ಪೊಲೀಸರ ಸಿನಿಮೀಯ ಶೈಲಿಯ ಕಾರ್ಯಾಚರಣೆ

JPEG 20260711 202207 2409074112167439370.jpg

ಬಸ್ ನಿಲ್ದಾಣದಲ್ಲಿ ಕಂದಮ್ಮನನ್ನು ಬಿಸಾಡಿದ್ದ ಪೋಷಕರು ಅಂದರ್! ರಿಪ್ಪನ್‌ಪೇಟೆ ಪೊಲೀಸರ ಸಿನಿಮೀಯ ಶೈಲಿಯ ಕಾರ್ಯಾಚರಣೆ

Ripponpete Police cracked the newborn baby abandonment case within a week using tower dump analysis and technical investigation. A 21-year-old woman and a 20-year-old man from Sagar have been taken into custody for allegedly abandoning the infant at a bus stand near Gavaturu.

​ರಿಪ್ಪನ್‌ಪೇಟೆ: ಹೆತ್ತ ಕರುಳನ್ನೇ ಕಸದಂತೆ ಬಸ್ ನಿಲ್ದಾಣದಲ್ಲಿ ಎಸೆದು ಪರಾರಿಯಾಗಿದ್ದ ಆ ಪೋಷಕರು ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾರೆ.

ಒಂದು ವಾರದ ಹಿಂದೆ ರಿಪ್ಪನ್‌ಪೇಟೆ ಸಮೀಪದ ಗವಟೂರು ಹೊಳೆ ಬಳಿಯ ಬಸ್ ನಿಲ್ದಾಣದಲ್ಲಿ ಅನಾಥವಾಗಿ ಪತ್ತೆಯಾಗಿದ್ದ ನವಜಾತ ಹೆಣ್ಣು ಶಿಶುವಿನ ಪ್ರಕರಣವನ್ನು ಭೇದಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ಸು ಕಂಡಿದ್ದಾರೆ.

ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಪೊಲೀಸರು


ಈ ಅಮಾನವೀಯ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ನೇತೃತ್ವದ ಪೊಲೀಸ್ ತಂಡ, ಆರೋಪಿಗಳ ಪತ್ತೆಗಾಗಿ ತಕ್ಷಣವೇ ಕಾರ್ಯಾಚರಣೆಗಿಳಿದಿತ್ತು. ಕೃತ್ಯ ನಡೆದ ಸ್ಥಳದ ಮೊಬೈಲ್ ಟವರ್ ಡಂಪ್ (Tower Dump) ಡೇಟಾವನ್ನು ಜಾಲಾಡಿದ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿತ್ತು. ಇದರ ಬೆನ್ನಲ್ಲೇ ತಾಂತ್ರಿಕ ಸಾಕ್ಷ್ಯಗಳು ಹಾಗೂ ರಹಸ್ಯ ಭಾತ್ಮಿದಾರರು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ಬಲೆ ಬೀಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಸಾಗರ ಮೂಲದ ಯುವಕ-ಯುವತಿ ವಶಕ್ಕೆ!

ಪೊಲೀಸರ ಬಲೆಗೆ ಬಿದ್ದವರು ಸಾಗರ ಮೂಲದ 21 ವರ್ಷದ ಯುವತಿ ಹಾಗೂ 20 ವರ್ಷದ ಯುವಕ. ಇವರನ್ನು ವಶಕ್ಕೆ ಪಡೆದು ಬೆವರಿಳಿಸಿದಾಗ, ತಾವೇ ಆ ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಪರಾರಿಯಾಗಿರುವುದಾಗಿ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ.

ಸದ್ಯ ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ಶಿಶುವಿನ ತಾಯಿಯನ್ನು ರಕ್ಷಣೆ ಹಾಗೂ ಆರೈಕೆಗಾಗಿ ಸುರಭಿ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಕೃತ್ಯದ ಹಿಂದಿನ ನಿಖರ ಕಾರಣವೇನು ಹಾಗೂ ಇವರ ಉದ್ದೇಶವೇನಿತ್ತು ಎಂಬುದರ ಬಗ್ಗೆ ಪೊಲೀಸರು ಮುಂದಿನ ಕಾನೂನು ಅಸ್ತ್ರ ಪ್ರಯೋಗಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ


ಯಾವುದೇ ಸುಳಿವಿಲ್ಲದ ಪ್ರಕರಣವನ್ನು ತಾಂತ್ರಿಕ ಮಾಹಿತಿ, ಟವರ್ ಡಂಪ್ ವಿಶ್ಲೇಷಣೆ ಹಾಗೂ ಗುಪ್ತ ಮಾಹಿತಿ ಆಧರಿಸಿ ಭೇದಿಸಿರುವ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿಯ ದಿಟ್ಟ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಘಟನೆ ಹೇಗೆ ಬೆಳಕಿಗೆ ಬಂದಿತ್ತು?

ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಮೀಪದ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಬಂದಿದ್ದು, ಸ್ಥಳ ಪರಿಶೀಲಿಸಿದಾಗ ಶಿಶು ಅನಾಥವಾಗಿ ಬಿದ್ದಿರುವುದು ಕಂಡುಬಂದಿತ್ತು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಾರದ ಹಿಂದೆ ಗವಟೂರು ಹೊಳೆ ಸಮೀಪದ ನಿರ್ಜನ ಬಸ್ ನಿಲ್ದಾಣದಲ್ಲಿ ಸುಮಾರು 10ರಿಂದ 15 ದಿನಗಳ ಪ್ರಾಯದ ಹೆಣ್ಣು ಶಿಶುವನ್ನು ಕೈಚೀಲದಲ್ಲಿ ಬಟ್ಟೆಯಲ್ಲಿ ಸುತ್ತಿ, ಜೊತೆಗೆ ಹಾಲಿನ ಬಾಟಲಿಯೊಂದಿಗೆ ಬಿಟ್ಟು ಹೋಗಲಾಗಿತ್ತು.

ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಆರೈಕೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಸುಮಾರು 1.6 ಕೆ.ಜಿ. ತೂಕವಿತ್ತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.