ಕೇಂದ್ರದಿಂದ ಮತದಾನದ ಹಕ್ಕು ಕಸಿಯುವ ಹುನ್ನಾರ: ಶಾಸಕ ಬೇಳೂರು ಗಂಭೀರ ಆರೋಪ!
Congress MLA Beluru Gopalakrishna alleged that the Central Government is attempting to deprive citizens of their voting rights through the SIR process during a Congress review meeting held at Ripponpete in Shivamogga district.
ರಿಪ್ಪನ್ಪೇಟೆ: ಕೇಂದ್ರದ ಬಿಜೆಪಿ ಸರ್ಕಾರವು ಎಸ್.ಐ.ಆರ್ (SIR) ಮೂಲಕ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ರಿಪ್ಪನ್ಪೇಟೆಯ ಎಸ್.ಆರ್. ಕಲ್ಯಾಣ ಮಂಟಪದಲ್ಲಿ ಶನಿವಾರ ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಎಸ್.ಐ.ಆರ್ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ
”ಈ ದೇಶದಲ್ಲಿ ಇಷ್ಟು ವರ್ಷಗಳಿಂದ ವಾಸವಿದ್ದರೂ ಜನರನ್ನು ದಾಖಲೆ ಕೇಳುವ ನೀಚ ಪ್ರವೃತ್ತಿಗೆ ಕೇಂದ್ರ ಸರ್ಕಾರ ಇಳಿದಿದೆ. ನಮಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರ ಅವಶ್ಯಕತೆ ಇಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮದೇ ಜನರ ಮತದಾನದ ಹಕ್ಕಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವು ಎಂದಿಗೂ ಧರ್ಮವನ್ನು ಒಡೆಯುವ ಸಂಸ್ಕೃತಿ ಬೆಳೆಸಿಲ್ಲ, ಸರ್ವಧರ್ಮೀಯರನ್ನು ಸಮಾನವಾಗಿ ಕಾಣುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಈಗಾಗಲೇ ಮತಗಟ್ಟೆ ಅಧಿಕಾರಿಗಳು (ಬಿಎಲ್ಓ) ಮನೆ-ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡುತ್ತಿದ್ದಾರೆ. ಉದ್ಯೋಗ ನಿಮಿತ್ತ ಅಥವಾ ಇತರೆ ಕಾರಣಗಳಿಗಾಗಿ ಹೊರಗಿರುವ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಬಿಎಲ್ಓಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಇದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಶಾಸಕರು ಕರೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಆಯನೂರು ಮಂಜುನಾಥ್, ಕೇಂದ್ರದ ಈ ಹುನ್ನಾರದ ಬಗ್ಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ತಿಳಿಸಿದರು. ಮನೆ ಸಮೀಕ್ಷೆಗೆ ಬರುವ ಬಿಎಲ್ಓಗಳಿಗೆ ಸರಿಯಾದ ಮಾಹಿತಿ ನೀಡಿ, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವ ಬಗ್ಗೆ ಪ್ರತಿಯೊಬ್ಬರೂ ದೃಢಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿಗೌಡ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ವೇತಾ ಆರ್ ಬಂಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೆಡಿಪಿ ಸದಸ್ಯ ಆಸೀಪ್ ಭಾಷಾ ಕಾರ್ಯಕ್ರಮವನ್ನು ನಿರೂಪಿಸಿದರು.