POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿದ ಯುವ ರೈತನಿಗೆ 2.05 ಕೋಟಿ ರೂ. ವಂಚನೆ!

GridArt 20260620

ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿದ ಯುವ ರೈತನಿಗೆ 2.05 ಕೋಟಿ ರೂ. ವಂಚನೆ!

A young farmer from Bhadravathi lost ₹2.05 crore in a massive cyber fraud after trusting an Instagram trading advertisement. The scammers used fake demat accounts, Telegram groups and false profit claims to cheat him over three years.

ಶಿವಮೊಗ್ಗ, ಜೂನ್ 20: ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಂಡ ಟ್ರೇಡಿಂಗ್ ಜಾಹೀರಾತು ನಂಬಿ ಹಣ ಹೂಡಿಕೆ ಮಾಡಿದ ಭದ್ರಾವತಿಯ ಯುವ ರೈತರೊಬ್ಬರು ಬರೋಬ್ಬರಿ 2 ಕೋಟಿ 5 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು 2023ರ ಜನವರಿಯಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ವೀಕ್ಷಿಸುತ್ತಿದ್ದ ವೇಳೆ “Xness” ಕಂಪನಿಯ ಲೋಗೋ ಬಳಸಿ ಪ್ರಕಟಿಸಲಾಗಿದ್ದ ಟ್ರೇಡಿಂಗ್ ಜಾಹೀರಾತನ್ನು ಗಮನಿಸಿದ್ದರು. ಕೆಲವೇ ದಿನಗಳಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ, ನಕಲಿ ವೆಬ್‌ಸೈಟ್ ತೆರೆಯಲ್ಪಟ್ಟಿದೆ.
ಅದರ ಮೂಲಕ ದೂರುದಾರರ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡ ವಂಚಕರು, ಅವರ ಹೆಸರಿನಲ್ಲಿ ನಕಲಿ ಡಿ-ಮ್ಯಾಟ್ ಖಾತೆಯನ್ನು ಸೃಷ್ಟಿಸಿದ್ದಾರೆ. ಆದರೆ ಅದರ ಲಾಗಿನ್ ವಿವರಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು, ದೊಡ್ಡ ಮೊತ್ತದ ಹೂಡಿಕೆ ಸಂದರ್ಭದಲ್ಲಿ ಮಾತ್ರ ನೀಡುವುದಾಗಿ ನಂಬಿಸಿದ್ದಾರೆ.

ನಂತರ ದೂರುದಾರರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ ವಂಚಕರು, ನಕಲಿ ಗ್ರಾಹಕರ ಖಾತೆಗಳನ್ನು ತೋರಿಸಿ ಭಾರೀ ಲಾಭ ಗಳಿಸಿರುವಂತೆ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಹಾಗೂ ಯುಪಿಐ ಲಿಂಕ್‌ಗಳನ್ನು ಕಳುಹಿಸಿ ನಿರಂತರವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ.

ಇದನ್ನು ನಂಬಿದ ರೈತ ಯುವಕ 2023ರ ಜನವರಿಯಿಂದ 2026ರ ಏಪ್ರಿಲ್‌ವರೆಗೆ ಹಂತ ಹಂತವಾಗಿ ಒಟ್ಟು ₹2,05,00,000 ಹಣವನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದ್ದಾರೆ.

ಮಧ್ಯಂತರದಲ್ಲಿ ಹಣ ವಾಪಸ್ ಪಡೆಯಲು ಪ್ರಯತ್ನಿಸಿದಾಗ, ಈಗಲೇ ಹಣ ಹಿಂಪಡೆದರೆ ಭಾರಿ ನಷ್ಟವಾಗುತ್ತದೆ, ಇನ್ನೂ ಕೆಲ ದಿನ ಕಾಯಿದರೆ ಕೋಟ್ಯಂತರ ರೂಪಾಯಿ ಲಾಭ ಸಿಗುತ್ತದೆ ಎಂದು ಹೇಳಿ ವಂಚಕರು ಅವರನ್ನು ನಂಬಿಸುತ್ತಾ ಬಂದಿದ್ದಾರೆ.

ಆದರೆ 2026ರ ಏಪ್ರಿಲ್‌ನಲ್ಲಿ ವೈಯಕ್ತಿಕ ಅಗತ್ಯಕ್ಕಾಗಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ, ವಂಚಕರು ದೂರುದಾರರ ಹೆಸರಿನಲ್ಲಿದ್ದ ಡಿ-ಮ್ಯಾಟ್ ಖಾತೆಯನ್ನು ಬ್ಲಾಕ್ ಮಾಡಿ ಸಂಪರ್ಕಕ್ಕೆ ಸಿಗದಂತೆ ನಾಪತ್ತೆಯಾಗಿದ್ದಾರೆ. ಆಗ ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ರೈತ ಯುವಕರಿಗೆ ಅರಿವಾಗಿದೆ.

ಈ ಕುರಿತು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.