Headlines

ಹುಲಿಕಲ್ ಘಾಟಿಯಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ – ಜಿಲ್ಲಾಡಳಿತದಿಂದ ಆದೇಶ

ಹುಲಿಕಲ್ ಘಾಟಿಯಲ್ಲಿ ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ – ಜಿಲ್ಲಾಡಳಿತದಿಂದ ಆದೇಶ

Light vehicle movement has been restored on Hulikal Ghat Road (SH-52) between Shivamogga and Kundapura from June 12, 2026, after temporary repair works and safety measures were completed following a landslide.

ಹೊಸನಗರ, ಜೂನ್ 12: ಶಿವಮೊಗ್ಗ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ (ಬಾಳೆಬರೆ) ಘಾಟ್ ರಸ್ತೆಯಲ್ಲಿ ಜೂನ್ 12ರಿಂದ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಳೆದ ಏಪ್ರಿಲ್ 9ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸುಮಾರು 12 ಮೀಟರ್ ಎತ್ತರದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಐದು ಅಡಿ ಆಳದ ಭೂಕುಸಿತ ಸಂಭವಿಸಿತ್ತು. ಜೊತೆಗೆ ರಸ್ತೆಯ ಮೇಲ್ಭಾಗದಲ್ಲೂ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿ ಕಟ್ಟೆಯಿಂದ ಹೊಸ ಅಂಗಡಿ ವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿತ್ತು.

ಈ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚಂಡಿಕಾಂಬ ದೇವಸ್ಥಾನದ ಬಳಿ ಮೆಟ್ಟಿಲುಗಳ ಮೂಲಕ ವಾಹನಗಳ ಅದಲು-ಬದಲು ವ್ಯವಸ್ಥೆ (ಷಟಲ್ ಸರ್ವೀಸ್) ಕಲ್ಪಿಸಲಾಗಿತ್ತು.

ಪ್ರಸ್ತುತ ಘಾಟ್ ರಸ್ತೆಯ ಹಾನಿಗೊಳಗಾದ ತಿರುವಿನಲ್ಲಿ ತಡೆಗೋಡೆ ನಿರ್ಮಿಸಿ, ರಸ್ತೆಯ ಮಟ್ಟದವರೆಗೆ ಮಣ್ಣಿನ ಏರಿಯನ್ನು ತುಂಬಿ ಲೀನ್ ಕಾಂಕ್ರೀಟ್ ಬಳಸಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ಆದಾಗ್ಯೂ, ಘಾಟ್ ಪ್ರದೇಶದಲ್ಲಿ ಮತ್ತೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಸ್ತೆಯುದ್ದಕ್ಕೂ ತಡೆಗೋಡೆಗಳು, ಎಚ್ಚರಿಕೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ವಾಹನ ಸವಾರರ ಸುರಕ್ಷತೆಗಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್‌ಗಳನ್ನು ಅಳವಡಿಸಲಾಗಿದೆ.

ಮೋಟಾರು ವಾಹನ ಕಾಯ್ದೆ-1988ರ ಕಲಂ 115 ಹಾಗೂ 116ರ ಅಡಿಯಲ್ಲಿ ಈ ಹಿಂದೆ ವಿಧಿಸಲಾಗಿದ್ದ ಸಂಪೂರ್ಣ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು, ಜೂನ್ 12, 2026ರಿಂದ ರಾಜ್ಯ ಹೆದ್ದಾರಿ-52ರ ಹುಲಿಕಲ್ ಘಾಟ್ ಮೂಲಕ ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ತಿಳಿಸಿದ್ದಾರೆ.

About The Author