w
Headlines
Home » ನಾಪತ್ತೆಯಾಗಿದ್ದ ಅಡಿಕೆ ಲಾರಿ ಪತ್ತೆ: ಕೋಟ್ಯಂತರ ಮೌಲ್ಯದ ಮಾಲು ವಶ, ಆರೋಪಿಗಳಿಗಾಗಿ ಪೊಲೀಸರ ಶೋಧ

ನಾಪತ್ತೆಯಾಗಿದ್ದ ಅಡಿಕೆ ಲಾರಿ ಪತ್ತೆ: ಕೋಟ್ಯಂತರ ಮೌಲ್ಯದ ಮಾಲು ವಶ, ಆರೋಪಿಗಳಿಗಾಗಿ ಪೊಲೀಸರ ಶೋಧ

GridArt 20260502

ನಾಪತ್ತೆಯಾಗಿದ್ದ ಅಡಿಕೆ ಲಾರಿ ಪತ್ತೆ: ಕೋಟ್ಯಂತರ ಮೌಲ್ಯದ ಮಾಲು ವಶ, ಆರೋಪಿಗಳಿಗಾಗಿ ಪೊಲೀಸರ ಶೋಧ

Missing arecanut-loaded lorry traced in Shivamogga; police recover goods worth over ₹1.29 crore and launch a manhunt for accused involved in alleged fraud and breach of trust.

ಶಿವಮೊಗ್ಗ: ಮ್ಯಾಮ್ಕೋಸ್‌ಗೆ ಸೇರಿದ ಅಡಿಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಪೊಲೀಸರು ಲಾರಿ ಸಹಿತ ಕೋಟ್ಯಂತರ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಮಾರ್ಚ್ 28ರಂದು ಕಾಣೆಯಾಗಿದ್ದ ಲಾರಿಗೆ ಸಂಬಂಧಿಸಿ ಭಾರತ್ ಟ್ರಾನ್ಸ್‌ಪೋರ್ಟ್‌ನ ಮ್ಯಾನೇಜರ್ ಕೃಷ್ಣ ಪೂಜಾರಿ ಅವರು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ದೂರಿನಲ್ಲಿ ಲಾರಿ ಚಾಲಕ ಹಾಗೂ ಮಾಲೀಕ ಸದ್ದಾಮ್ ಅಲಿಯಾಸ್ ಮುಹಿಬುಲ್ಲಾ ಖಾನ್, ಮೊಹಮದ್ ಗೌಸ್ ಮತ್ತು ನೌಶದ್ ಸೇರಿಕೊಂಡು ಅಡಿಕೆಯನ್ನು ದುರುಪಯೋಗಪಡಿಸಿಕೊಂಡು ಮೋಸ ಮತ್ತು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಕೋಡಿಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಲಾರಿಯನ್ನು ಪತ್ತೆ ಹಚ್ಚಿ, ಅದರಲ್ಲಿದ್ದ ಸುಮಾರು ₹1.29 ಕೋಟಿ ಮೌಲ್ಯದ 350 ಚೀಲ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಲಾರಿ (ಅಂದಾಜು ₹20 ಲಕ್ಷ) ಸಹ ಜಪ್ತಿ ಮಾಡಲಾಗಿದೆ.

ಮೂಲ ಮಾಹಿತಿ ಪ್ರಕಾರ, ಶಿವಮೊಗ್ಗದಿಂದ ಬೆಂಗಳೂರು ಯಶವಂತಪುರಕ್ಕೆ ಅಡಿಕೆಯನ್ನು ಸಾಗಿಸಲು ಮುಹಿಬುಲ್ಲಾಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಮಾರ್ಚ್ 26ರಂದು ರಾತ್ರಿ ಹೊರಟ ಲಾರಿ ಗುರಿ ಸ್ಥಳ ತಲುಪದೆ ಕಾಣೆಯಾಗಿತ್ತು. ನಂತರ ಚಾಲಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು, ವಿಚಾರಣೆ ವೇಳೆ ಆತನು ಮೊಹಮದ್ ಗೌಸ್ ಮತ್ತು ನೌಶದ್ ಜೊತೆ ಸೇರಿಕೊಂಡು ಅಡಿಕೆಯನ್ನು ಮಾರಾಟ ಮಾಡುವ ಯೋಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಹಿರಿಯೂರು ಸಮೀಪ ಅವರು ಲಾರಿಯಿಂದ ಬೇರ್ಪಟ್ಟು ಅಡಿಕೆಯನ್ನು ಮಾರಾಟ ಮಾಡಿ ಹಣ ಹಂಚಿಕೊಳ್ಳುವ ಯೋಜನೆ ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಕಾರ್ಯಪ್ಪ ಎ.ಜಿ., ಭದ್ರಾವತಿ ಡಿಎಸ್‌ಪಿ ಪ್ರಕಾಶ್ ರಾಥೋಡ್ ಅವರ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಸಿಪಿಐ ಶಿವಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಏಪ್ರಿಲ್ 30ರಂದು ಲಾರಿ ಮತ್ತು ಮಾಲನ್ನು ವಶಪಡಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.