w
Headlines
Home » ಶಾಸಕತ್ವ ಹೋದರೂ ಚಿಂತೆಯಿಲ್ಲ ಜನರಿಗೆ ಮಾರಕವಾಗುವ ಯೋಜನೆ ಜಾರಿಗೆ ಬಿಡುವುದಿಲ್ಲ — ಅಣು ಯೋಜನೆ ವಿರುದ್ಧ ಶಾಸಕ ಬೇಳೂರು ಘೋಷಣೆ

ಶಾಸಕತ್ವ ಹೋದರೂ ಚಿಂತೆಯಿಲ್ಲ ಜನರಿಗೆ ಮಾರಕವಾಗುವ ಯೋಜನೆ ಜಾರಿಗೆ ಬಿಡುವುದಿಲ್ಲ — ಅಣು ಯೋಜನೆ ವಿರುದ್ಧ ಶಾಸಕ ಬೇಳೂರು ಘೋಷಣೆ

GridArt 20260507

ಶಾಸಕತ್ವ ಹೋದರೂ ಚಿಂತೆಯಿಲ್ಲ ಜನರಿಗೆ ಮಾರಕವಾಗುವ ಯೋಜನೆ ಜಾರಿಗೆ ಬಿಡುವುದಿಲ್ಲ — ಅಣು ಯೋಜನೆ ವಿರುದ್ಧ ಶಾಸಕ ಬೇಳೂರು ಘೋಷಣೆ

“ಮಲೆನಾಡು ನಾಶವಾಗಲು ಯಾವ ಕಾರಣಕ್ಕೂ ಬಿಡಲ್ಲ – ಮಾಜಿ ಸಚಿವ ಹರತಾಳು ಹಾಲಪ್ಪ

Leaders and residents intensified protests against the proposed nuclear power plant in Besuru, warning that the project could destroy the Malnad region and its forests. Public meetings and protests will continue until the plan is dropped.

ಶಿವಮೊಗ್ಗ: ಬೇಸೂರು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ವಿರೋಧ ವ್ಯಕ್ತವಾಗುತ್ತಿದ್ದು, ಜನವಿರೋಧಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡುವುದಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಂತದಲ್ಲಿ ಭೂಮಿ ಮಂಜೂರು ಆಗದಂತೆ ತಡೆಯುವುದಾಗಿ ಹೇಳಿದರು. ಜೊತೆಗೆ, ಕೇಂದ್ರ ಸರ್ಕಾರದಿಂದ ಯೋಜನೆಗೆ ಅನುಮತಿ ದೊರಕದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಒತ್ತಡ ಹೇರುವಂತೆ ಆಗ್ರಹಿಸಿದರು. ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಈ ಭಾಗ ಸಂಪೂರ್ಣ ಹಾನಿಗೊಳಗಾಗಲಿದೆ. ಜನರಿಗೆ ಅಪಾಯ ಉಂಟುಮಾಡುವ ಯಾವುದೇ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ. ಇದಕ್ಕಾಗಿ ಶಾಸಕತ್ವ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಅಣು ವಿದ್ಯುತ್ ಸ್ಥಾವರದಿಂದ ಕೇವಲ ಬೇಸೂರು ಭಾಗಕ್ಕಷ್ಟೇ ತೊಂದರೆ ಎನ್ನುವ ಮನೋಭಾವ ಜನರಲ್ಲಿ ಇರಬಾರದು. ಸಂಪೂರ್ಣ ಮಲೆನಾಡು ಪ್ರದೇಶದ ಜನರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಮಲೆನಾಡು ಪ್ರದೇಶದಲ್ಲಿ ಇಂತಹ ಯೋಜನೆ ಜಾರಿಗೆ ತರುವುದು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ಸುಮಾರು 4 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ 2 ಸಾವಿರ ಎಕರೆ ಭೂಮಿ ಕೇಳಲಾಗಿದೆ ಎಂದು ಹೇಳಿದರು. ಆದರೆ ಇಷ್ಟೊಂದು ಪ್ರಮಾಣದ ವಿದ್ಯುತ್ ಸರಬರಾಜಿಗೆ ವಿದ್ಯುತ್ ತಂತಿ ಎಳೆಯಲು ಸಾವಿರಾರು ಎಕರೆ ಅರಣ್ಯ ನಾಶವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸಂಸದರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಯೋಜನೆ ಕುರಿತ ಮಾಹಿತಿ ನೀಡಲಾಗಿದ್ದು, ಅವರ ಮೂಲಕವೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಬಿ.ಎ. ಇಂದೂಧರ ಬೇಸೂರು ಮಾತನಾಡಿ, ಯಾವುದೇ ಕಾರಣಕ್ಕೂ ಬೇಸೂರು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯೋಜನೆ ಕೈಬಿಡುವವರೆಗೆ ಸರಣಿ ಸಭೆಗಳು ಹಾಗೂ ಹೋರಾಟ ಮುಂದುವರಿಯಲಿದೆ ಎಂದರು. ಈಗಾಗಲೇ ಶಾಸಕರು ಸರ್ಕಾರ, ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದ್ದು, ಸಂಸದರಿಗೆ ಸಹ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಆರ್. ಜಯಂತ್, ದಿನೇಶ್ ಶಿರವಾಳ, ಅಖಿಲೇಶ್ ಚಿಪ್ಪಿ, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ರವಿಕುಮಾರ್ ಸಿಗಂದೂರು, ಅನ್ಸರ್ ಸಖಾಫಿ, ಪೋಷಿಣಿ ಬೇಸೂರು ಸೇರಿದಂತೆ ಹಲವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಶಿವಾನಂದ ಕುಗೈ, ಹೊನಗೋಡು ರತ್ನಾಕರ್, ವ.ಶಂ. ರಾಮಚಂದ್ರ ಭಟ್, ರವಿಕುಮಾರ್ ಎಚ್.ಎಂ., ಎಂ.ವಿ. ಪ್ರತಿಭಾ, ಸಫಿಯಾ ಅಬೂಬಕರ್, ಸುವರ್ಣ ಟೀಕಪ್ಪ, ಚೇತನರಾಜ ಕಣ್ಣೂರು, ಡಾ. ಜೀವನ್, ರೋಹಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜಿ.ಟಿ. ಸತ್ಯನಾರಾಯಣ ನಿರ್ವಹಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.