w
Headlines
Home » ತ್ಯಾವರೆಕೊಪ್ಪ ಮೃಗಾಲಯದಲ್ಲಿ ದುರಂತ: ನೀರಾನೆ ದಾಳಿಗೆ ಪಶುವೈದ್ಯೆ ಬಲಿ

ತ್ಯಾವರೆಕೊಪ್ಪ ಮೃಗಾಲಯದಲ್ಲಿ ದುರಂತ: ನೀರಾನೆ ದಾಳಿಗೆ ಪಶುವೈದ್ಯೆ ಬಲಿ

GridArt 20260320

A young veterinarian, Dr. Sameeksha Reddy, died after a hippopotamus attack at Tyavarekoppa Zoo in Shivamogga. Forest Minister orders high-level probe into the incident.

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಮೃತ ದುರ್ಧೈವಿಯಾಗಿದ್ದಾರೆ.

ಸಫಾರಿಯಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿದ್ದ ಡಾ. ಸಮೀಕ್ಷಾ ರೆಡ್ಡಿ ಅವರು ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ ಸುಮಾರು 10:30ರ ವೇಳೆಗೆ ಸನ್ ಕಾನರ್ ಹಕ್ಕಿಗೆ ಚಿಕಿತ್ಸೆ ನೀಡಲು ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ನಂತರ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರಿಶೀಲಿಸಲು ಅದರ ಆವರಣದೊಳಗೆ ಪ್ರವೇಶಿಸಿದ ವೇಳೆ, ನೀರಾನೆ ಹಠಾತ್ತಾಗಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ 6:30ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಘಟನೆಗೆ ಕಾರಣಗಳೇನು, ಸುರಕ್ಷತಾ ಲೋಪಗಳಿದ್ದವೆಯೇ ಎಂಬುದನ್ನು ಪರಿಶೀಲಿಸಿ ಏಳು ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಇದೇ ವೇಳೆ, ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಕಡ್ಡಾಯವಾಗಿ ಜಾರಿಗೊಳಿಸುವಂತೆ ಸಚಿವರು ನಿರ್ದೇಶಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ವನ್ಯಜೀವಿಗಳ ಸಮೀಪ ಕಾರ್ಯನಿರ್ವಹಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. “ಇದು ಅತ್ಯಂತ ದುಃಖದ ಘಟನೆ. ಸರ್ಕಾರ ಮೃತರ ಕುಟುಂಬದೊಂದಿಗೆ ನಿಂತಿದೆ,” ಎಂದು ಸಚಿವರು ಸಂತಾಪ ಸೂಚಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.