w
Headlines
Home » ಬಂಪರ್ ಬಹುಮಾನದ ಆಮಿಷ: ಸಾರ್ವಜನಿಕರಿಗೆ 3 ಕೋಟಿಗೂ ಅಧಿಕ ವಂಚನೆ ಆರೋಪ – ‘ಆಯಾನ್ ಗ್ರೂಪ್’ ಮಾಲೀಕರ ವಿರುದ್ಧ ದೂರು

ಬಂಪರ್ ಬಹುಮಾನದ ಆಮಿಷ: ಸಾರ್ವಜನಿಕರಿಗೆ 3 ಕೋಟಿಗೂ ಅಧಿಕ ವಂಚನೆ ಆರೋಪ – ‘ಆಯಾನ್ ಗ್ರೂಪ್’ ಮಾಲೀಕರ ವಿರುದ್ಧ ದೂರು

GridArt 20260329

A massive ₹3 crore fraud by Ayaan Group owners Abdul Razak and Sheikh Fazal exposed. Over 1960 people were duped through fake bumper prize schemes in Karnataka.

ಹೊಸನಗರ: ಆಕರ್ಷಕ ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಬಹುಮಾನದ ಆಮಿಷವೊಡ್ಡಿ, ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಬೃಹತ್ ಜಾಲವೊಂದು ಬೆಳಕಿಗೆ ಬಂದಿದೆ. ಉಡುಪಿ ಮೂಲದ ‘ಆಯಾನ್ ಗ್ರೂಪ್’ ಮಾಲೀಕರು ಬರೋಬ್ಬರಿ 3 ಕೋಟಿಗೂ ಅಧಿಕ ಹಣವನ್ನು ಗುಳುಂ ಮಾಡಿರುವ ಬಗ್ಗೆ ಹೊಸನಗರ ತಾಲೂಕಿನ ಏಜೆಂಟ್ ಓರ್ವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

​ಹೊಸನಗರ ತಾಲೂಕಿನ ಹಳೇ ಸಾಗರ ರಸ್ತೆಯ ದ್ರಾವರ್ಸ ನಿವಾಸಿ ನಿಹಾಲ್ ಈ ಬಗ್ಗೆ ದೂರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಉಚ್ಚಿಲ ಬಾಡದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ಎಂಬುವವರೇ ವಂಚನೆಗೈದ ಆರೋಪಿಗಳಾಗಿದ್ದಾರೆ.

ವಂಚನೆಯ ಜಾಲ ಹೆಣೆದಿದ್ದು ಹೇಗೆ?

ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ಶೇಕ್ ಮಹಮ್ಮದ್ ಫಜಲ್ ‘ಆಯಾನ್ ಗ್ರೂಪ್’ ಹೆಸರಿನಲ್ಲಿ 13, 16 ಮತ್ತು 21 ತಿಂಗಳ ಸ್ಕೀಮ್‌ಗಳನ್ನು ಪರಿಚಯಿಸಿದ್ದರು. ಪ್ರತಿ ತಿಂಗಳು 1,000 ರೂ. ಕಂತು ಕಟ್ಟಿದರೆ, ಸ್ಕೀಮ್ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಆಕರ್ಷಕ ಬಹುಮಾನ ನೀಡುವುದಾಗಿ ನಂಬಿಸಿದ್ದರು. ಅಲ್ಲದೆ, ಗ್ರಾಹಕರನ್ನು ಕರೆತರುವ ಏಜೆಂಟರಿಗೆ ಪ್ರತಿ ಕಾರ್ಡ್‌ಗೆ 300 ರೂ. ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದರು.


24 ಲಕ್ಷ ಕಳೆದುಕೊಂಡು ಕಂಗಾಲಾದ ಯುವಕ:


ಇದನ್ನು ನಂಬಿದ ನಿಹಾಲ್, 2023ರ ಮೇ ತಿಂಗಳಿನಿಂದ ಸುಮಾರು 150 ಗ್ರಾಹಕರನ್ನು ಸಂಪರ್ಕಿಸಿ ಅವರಿಂದ ಹಣ ಸಂಗ್ರಹಿಸಿದ್ದರು. ಗ್ರಾಹಕರ ಕಂತಿನ ಒಟ್ಟು 24,00,000/- ರೂ. ಹಣವನ್ನು ಆರೋಪಿಗಳ ಫೋನ್ ಪೇ ಖಾತೆಗಳಿಗೆ ಜಮಾ ಮಾಡಿದ್ದರು. ದಿನಾಂಕ 04/05/2025 ರಂದು ಸ್ಕೀಮ್ ಮುಕ್ತಾಯಗೊಂಡರೂ, ಆರೋಪಿಗಳು ಯಾವುದೇ ಬಹುಮಾನವನ್ನಾಗಲೀ, ಹಣವನ್ನಾಗಲೀ ಮರುಪಾವತಿಸದೆ ಸತಾಯಿಸಿದ್ದಾರೆ. ಹಣ ಹೂಡಿಕೆ ಮಾಡಿದ್ದ ಗ್ರಾಹಕರು ಇದೀಗ ಏಜೆಂಟ್ ನಿಹಾಲ್ ಮನೆ ಬಾಗಿಲಿಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದು, ಯುವಕ ಮಾನಸಿಕವಾಗಿ ಜರ್ಜರಿತನಾಗಿದ್ದಾನೆ.

1900ಕ್ಕೂ ಹೆಚ್ಚು ಜನರಿಗೆ ವಂಚನೆ, 3 ಕೋಟಿ ಗುಳುಂ!

ದೂರುದಾರ ನಿಹಾಲ್ ಮಾತ್ರವಲ್ಲದೆ ಇತರೆ 7-8 ಜನ ಏಜೆಂಟರುಗಳು ಕೂಡ ಇದೇ ರೀತಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಆಯಾನ್ ಗ್ರೂಪ್‌ಗೆ ನೀಡಿದ್ದಾರೆ. ಒಟ್ಟಾರೆ 1900ಕ್ಕೂ ಹೆಚ್ಚು ಮುಗ್ಧ ಜನರಿಗೆ ಈ ಜಾಲ ವಂಚನೆ ಬಲೆ ಹೆಣೆದಿದ್ದು, ಬರೋಬ್ಬರಿ 3 ಕೋಟಿಗೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಸಾರ್ವಜನಿಕರ ನಂಬಿಕೆ ದ್ರೋಹ ಮಾಡಿರುವ ಅಬ್ದುಲ್ ರಜಾಕ್ ಹಾಗೂ ಶೇಕ್ ಮಹಮ್ಮದ್ ಫಜಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕಳೆದುಕೊಂಡಿರುವ ಹಣವನ್ನು ಹಿಂದಿರುಗಿಸಿಕೊಡುವಂತೆ ನಿಹಾಲ್ ಮಾ.28 ರಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರಜಾಕ್ ಎಂಬಾತನನ್ನು ಹೊಸನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಅಯಾನ್ ಗ್ರೂಪ್ ಮಾಲೀಕನನ್ನು ಬಂಧಿಸಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹೊಸನಗರ ಠಾಣೆ ಮುಂಭಾಗದಲ್ಲಿ ಮೋಸಹೋದ ಗ್ರಾಹಕರು ಜಮಾವಣೆಗೊಂಡು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.