A widow in Bhadravathi taluk of Shivamogga district died by suicide after allegedly facing harassment and defamation by a police personnel, leaving behind a WhatsApp death note naming the accused.
ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದು ವಿಧವೆಯ ಆತ್ಮಹತ್ಯೆ: ಪೊಲೀಸಪ್ಪನ ಕಾಟ ಆರೋಪ, ಕ್ರಮಕ್ಕೆ ಆಗ್ರಹ
ಶಿವಮೊಗ್ಗ: ಪೊಲೀಸರ ಕಾಟ ತಾಳಲಾರದೆ ವಿಧವೆಯೊಬ್ಬಳು ವಾಟ್ಸಾಪ್ನಲ್ಲಿ ಡೆತ್ ನೋಟ್ ಬರೆದು ನೇಣಿಗೆ ಶರಣಾದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಲಾಗಿದೆ.
ಮೃತ ಸ್ವಾತಿ ಸಾವಿಗೂ ಮುನ್ನ ಬರೆದ ಡೆತ್ ನೋಟ್ನಲ್ಲಿ, ತೀರ್ಥಹಳ್ಳಿ ಪೊಲೀಸ್ ಠಾಣೆನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಎಂಬ ಪೊಲೀಸ್ ಸಿಬ್ಬಂದಿಯ ಹೆಸರನ್ನು ಉಲ್ಲೇಖಿಸಿದ್ದಾರೆ. ಸ್ವಾತಿಗೆ ಮದುವೆಯಾಗಿ ಏಳು ವರ್ಷವಾಗಿದ್ದು, ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಪತಿಯ ಸಾವಿನ ಬಳಿಕ ಈ ದುರ್ಘಟನೆಯನ್ನು ಬಂಡವಾಳ ಮಾಡಿಕೊಂಡು, ಮೋಹನ್ ಫೇಸ್ಬುಕ್ ಮೂಲಕ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಸ್ವಾತಿ ಆ ಖಾತೆಯನ್ನು ಬ್ಲಾಕ್ ಮಾಡಿದ ಹಿನ್ನೆಲೆಯಲ್ಲಿ ಕೋಪಗೊಂಡು, ಬೇರೆ ಖಾತೆಯಿಂದ ಅವಳ ಕುರಿತು ಅಪಪ್ರಚಾರ ನಡೆಸಿದ್ದಾನೆ ಎಂಬುದಾಗಿ ಡೆತ್ ನೋಟ್ನಲ್ಲಿ ಉಲ್ಲೇಖವಾಗಿದೆ. ಇದರಿಂದ ಮನನೊಂದ ಸ್ವಾತಿ ಆತ್ಮಹತ್ಯೆಗೆ ಶರಣಾದರೆಂದು ಕುಟುಂಬದವರು ತಿಳಿಸಿದ್ದಾರೆ.
ಡೆತ್ ನೋಟ್ನಲ್ಲಿ ಸ್ವಾತಿ, “ನನ್ನ ಬಗ್ಗೆ ಇಲ್ಲದ ಕೆಟ್ಟ ಮಾತುಗಳನ್ನು ಜನರ ಮುಂದೆ ಹೇಳಲಾಗಿದೆ. ಇದನ್ನು ತಾಳಲು ಸಾಧ್ಯವಾಗುತ್ತಿಲ್ಲ. ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ ವ್ಯಕ್ತಿಯನ್ನು ನಾನು ಬ್ಲಾಕ್ ಮಾಡಿದ ಕಾರಣಕ್ಕೆ ಈ ಅಪಪ್ರಚಾರ ನಡೆದಿದೆ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಆ ವ್ಯಕ್ತಿಯನ್ನು ಸುಮ್ಮನೆ ಬಿಡಬೇಡಿ” ಎಂದು ಮನವಿ ಮಾಡಿದ್ದಾರೆ.
ಈ ಘಟನೆಗೆ ಬಳಿಕ, ಸ್ವಾತಿಯ ತಂದೆ–ತಾಯಿಯು ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಾಯಿ–ತಂದೆ ಇಬ್ಬರನ್ನೂ ಕಳೆದುಕೊಂಡ ಇಬ್ಬರು ಬಾಲಕಿಯರು ಅನಾಥರಾಗಿದ್ದು, ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.