Breaking
13 Jan 2026, Tue

ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ ಪಶುವೈದ್ಯಾಧಿಕಾರಿ ನೀರುಪಾಲು

A senior veterinary officer, Dr. Sunil (38), drowned while swimming in the Sharavathi backwaters near Sagara in Shivamogga district on January 11.

ಸಾಗರ | ಜನವರಿ 11: ಶರಾವತಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪಶುವೈದ್ಯಾಧಿಕಾರಿಯೊಬ್ಬರು ಆಕಸ್ಮಿಕವಾಗಿ ನೀರುಪಾಲಾಗಿ ಮೃತಪಟ್ಟ ದಾರುಣ ಘಟನೆ ಸಾಗರ ತಾಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಸಮೀಪ ಭಾನುವಾರ (ಜನವರಿ 11) ನಡೆದಿದೆ.


ಮೃತರನ್ನು ಡಾ. ಸುನೀಲ್ (38) ಎಂದು ಗುರುತಿಸಲಾಗಿದ್ದು, ಇವರು ಮಾಸೂರಿನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ಭಾನುವಾರ ಕರ್ತವ್ಯಕ್ಕೆ ರಜೆಯಿದ್ದ ಹಿನ್ನೆಲೆ ಮಧ್ಯಾಹ್ನ ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕಾಗಿ ಶರಾವತಿ ಹಿನ್ನೀರು ಪ್ರದೇಶಕ್ಕೆ ಬಂದಿದ್ದ ಡಾ. ಸುನೀಲ್, ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.


ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಹಲವು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿ, ಕೊನೆಗೆ ನೀರಿನಿಂದ ಮೃತದೇಹವನ್ನು ಹೊರತೆಗೆದಿದೆ.


ಶೋಧ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಹೆಗ್ಗೆನಾಯಕ, ಲೀಡಿಂಗ್ ಫೈರ್‌ಮ್ಯಾನ್‌ಗಳಾದ ರಾಜೇಂದ್ರ ಡಿ.ಬಿ., ಗಣೇಶ್ ಆರ್. ಶೇಟ್, ಸಿಬ್ಬಂದಿಗಳಾದ ವಿಶ್ವನಾಥ ರೆಡ್ಡಿ, ಶಿವಕುಮಾರ್ ಡಿ., ಸತೀಶ್ ಕುಮಾರ್, ಜಯಂತ್ ಭಾಗವಹಿಸಿದ್ದರು.


ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್