ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿದರೆ ಯುವಜನರ ಆರೋಗ್ಯ ಮತ್ತು ನಾಯಕತ್ವ ವೃದ್ಧಿ: ಶಾಸಕ ಬೇಳೂರು ಗೋಪಾಲಕೃಷ್ಣ

MLA Belur Gopalakrishna emphasized the importance of rural sports for youth health and leadership while inaugurating a district-level floodlight volleyball tournament at Talale village near Ripponpete.
ರಿಪ್ಪನ್‌ಪೇಟೆ: ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದರಿಂದ ಗ್ರಾಮದ ಹಿತ ಕಾಪಾಡುವ ಜೊತೆಗೆ ಯುವಜನರ ದೈಹಿಕ-ಮಾನಸಿಕ ಆರೋಗ್ಯವನ್ನೂ ವೃದ್ಧಿಸಬಹುದು ಎಂದು ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ಸಮೀಪದ ತಳಲೆ ಗ್ರಾಮದಲ್ಲಿ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಿಂದ ಸಮಾಜದಲ್ಲಿ ನೈತಿಕತೆ ವೃದ್ಧಿಯಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಸಂಘಟನೆ ಹಾಗೂ ಶಿಸ್ತು ರೂಪುಗೊಳ್ಳುತ್ತದೆ ಎಂದು ಹೇಳಿದರು.
ಇಂದಿನ ಗ್ರಾಮೀಣ ಯುವಕರು ಮೊಬೈಲ್ ಮತ್ತು ಟಿವಿಯ ಪ್ರಭಾವದಿಂದ ಕ್ರೀಡೆಗಳಿಂದ ದೂರವಾಗುತ್ತಿದ್ದಾರೆ. ಅಜಾಗರೂಕತೆಯಿಂದ ಅನಾರೋಗ್ಯಕರ ಆಹಾರ ಸೇವನೆಯೂ ಹೆಚ್ಚಾಗಿದೆ. ಕ್ರೀಡೆ ದೇಹಾರೋಗ್ಯ ಕಾಪಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಉತ್ತಮ ಆಹಾರ ಮತ್ತು ಕ್ರೀಡಾಸಕ್ತಿಯಿಂದ ಆರೋಗ್ಯವಂತ ಜೀವನ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕ್ರೀಡಾಪ್ರೇಮಿ ವಿಜಯ ಮಳವಳ್ಳಿ ಮಾತನಾಡಿ, ಇಂದು ಕ್ರೀಡೆ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದೆ. ದೈಹಿಕ ಕಸರತ್ತು ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಅನೇಕ ಗ್ರಾಮೀಣ ಆಟಗಳು ಮರೆಯಾಗುತ್ತಿವೆ. ಹಳ್ಳಿಗಳಲ್ಲಿನ ಪ್ರತಿಭೆಗಳಿಗೆ ಸರಿಯಾದ ಅವಕಾಶ, ಪ್ರಚಾರ ಮತ್ತು ಮಾರ್ಗದರ್ಶನ ಸಿಗದ ಕಾರಣ ಅವು ಬೆಳೆಯದೇ ಉಳಿಯುತ್ತಿವೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಕ್ರೀಡಾಕೂಟಗಳು ನಡೆದರೆ ಪ್ರತಿಭೆಗಳಿಗೆ ವೇದಿಕೆ ದೊರೆಯುತ್ತದೆ ಎಂದರು.
ಪಂದ್ಯಾವಳಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೀರಭದ್ರಪ್ಪ (ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ), ಗಣಪತಿ (ನಿವೃತ್ತ ಶಿಕ್ಷಕ), ಭೋಜಪ್ಪ ಬಿ. (ರಾಷ್ಟ್ರ ಪ್ರಶಸ್ತಿ ಪುರಸ್ಕೃತ), ಶಿಲ್ಪಾ (ಜಿಲ್ಲಾ ಅತ್ಯುತ್ತಮ ಶಿಕ್ಷಕಿ), ಗಂಗಾಧರ (ಮೆಸ್ಕಾಂ ನೌಕರ), ಸೊನಾಲಿ (ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು) ಮತ್ತು ಆಯಿಶ್ರೀ (ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೇಯಸ್ ಚೂಡಾಮಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಿಎಸ್‌ಐ ರಾಜು ರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯರಾದ ನಾಗರತ್ನ ಶ್ಯಾಮಸುಂದರ್, ವಿಶುಕುಮಾರ್, ದಿನೇಶ್ ಗೌಡ್ರು ಹೊಳೇನಕೊಪ್ಪ, ದೇವರಾಜ್ ಮಳವಳ್ಳಿ, ಚೇತನ್ ವರನಹೊಂಡ, ಸಾಮಾಜಿಕ ಕಾರ್ಯಕರ್ತ ಕಗ್ಗಲಿ ಲಿಂಗಪ್ಪ,ಚಿಗುರು ಶ್ರೀಧರ್, ಪ್ರವೀಣ್ ಸುಳಗೋಡು, ಬೇಕರಿ ಸುರೇಶ್, ಚಂದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಆಸೀಫ್ ಮೂಗುಡ್ತಿ, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ರಾಕೇಶ್ (ಕಗ್ಗಲಿ), ಅರುಣ್, ವಿಜಯ್ ರಾಜ್ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

















