POSTMANNEWS

ನೈಜ ಸುದ್ದಿ ನೇರ ಬಿತ್ತರ..

ಪೌಡರ್ ಮಾರಾಟದ ನೆಪದಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನ; ಚಿನ್ನ ಪಳಪಳ ಮಾಡುತ್ತೇವೆಂದು ನಂಬಿಸಿ ಖದೀಮರು ಪರಾರಿ

A gold theft incident was reported in Chennakoppa village of Sagara taluk where fraudsters posed as powder sellers. A case has been registered at Anandapur Police Station.

ಸಾಗರ: ತಾಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ಪೌಡರ್ ಮಾರಾಟಕ್ಕೆ ಬಂದ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಚಿನ್ನಾಭರಣವನ್ನು ಮೋಸದಿಂದ ಕದ್ದೊಯ್ದ ಘಟನೆ ನಡೆದಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ನಿವಾಸಿ ರತ್ನಾವತಿ ಅವರ ಮನೆ ಬಾಗಿಲಿಗೆ ಸುಮಾರು 35–40 ವರ್ಷದ ಇಬ್ಬರು ವ್ಯಕ್ತಿಗಳು ಆಗಮಿಸಿದ್ದರು. ಇವರಲ್ಲಿ ಒಬ್ಬರು ಪಾತ್ರೆ ಸ್ವಚ್ಛಗೊಳಿಸುವ ಬಿಳಿ ಬಣ್ಣದ ಪೌಡರ್ ಮಾರಾಟಕ್ಕೆ ಇದೆ ಎಂದು ಸ್ಯಾಂಪಲ್ ನೀಡಿದ್ದು, ಇನ್ನೊಬ್ಬರು ಬೆಳ್ಳಿ ಹಾಗೂ ಬಂಗಾರ ತೊಳೆಯುವ ಕೆಂಪು ಪೌಡರ್ ಕೂಡ ಇದೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದಾರೆ.

ಚಿನ್ನ ಪಳಪಳ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿ ರತ್ನಾವತಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ತೆಗೆಯಲು ಕೇಳಿದಾಗ ಅವರು ನಿರಾಕರಿಸಿದರು. ಬಳಿಕ, ಕುತ್ತಿಗೆಯಲ್ಲಿದ್ದಂತೆಯೇ ಸರಕ್ಕೆ ಪೌಡರ್ ಹಚ್ಚುವಂತೆ ಸೂಚಿಸಿದ್ದು, ಪೌಡರ್ ಹಚ್ಚಿದ ತಕ್ಷಣ ಬಂಗಾರ ಕಪ್ಪಾಗಿದೆ.
ತಕ್ಷಣ ಆರೋಪಿಗಳು ಮನೆಯವರಿಂದ ಬಟ್ಟಲಿನಲ್ಲಿ ನೀರು ಮತ್ತು ಅರಿಶಿನ ತರಿಸಿಕೊಂಡು, ಕಪ್ಪಾದ ಸರವನ್ನು ಅದರಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ಚಿನ್ನದ ಬಣ್ಣ ಮರಳಿ ಬರುತ್ತದೆ ಎಂದು ಹೇಳಿದರು. ಇದೇ ವೇಳೆ ಪಾತ್ರೆಗೆ ಮತ್ತಷ್ಟು ಪೌಡರ್ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಅವರು ತೆರಳಿದ ಬಳಿಕ ರತ್ನಾವತಿ ಪಾತ್ರೆಯ ನೀರು ಚೆಲ್ಲಿ ನೋಡಿದಾಗ, ಚಿನ್ನ ಪಳಪಳ ಹೊಳೆಯುವ ಬದಲು ಸರವೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತೆ ಆನಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author