After months of uncertainty, parents’ collective struggle helped resolve the SSLC 2024–25 marks card issue of Ramakrishna Vidyalaya, Ripponpete, ensuring justice for students’ academic future.
ರಿಪ್ಪನ್ ಪೇಟೆ: 2024–25ನೇ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ, ರಿಪ್ಪನ್ ಪೇಟೆಯ 10ನೇ ತರಗತಿ ವಿದ್ಯಾರ್ಥಿಗಳ ಅಂಕಪಟ್ಟಿಗೆ ಸಂಬಂಧಿಸಿದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಜಯ ಯಾವುದೇ ಒಂದು ಸಂಸ್ಥೆಯದ್ದಲ್ಲ, ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿದ ಪೋಷಕರ ಹೋರಾಟದ ಫಲ ಎಂದು ಸ್ಪಷ್ಟವಾಗಿ ಹೇಳಬಹುದು.
ಪರೀಕ್ಷಾ ನೋಂದಣಿ, ಶುಲ್ಕ ಪಾವತಿ ಹಾಗೂ ಪ್ರವೇಶ ಪತ್ರಗಳಲ್ಲಿ ಶ್ರೀ ರಾಮಕೃಷ್ಣ ವಿದ್ಯಾಲಯದ ಹೆಸರೇ ಇದ್ದರೂ, ಕೆಲವು ಕಾನೂನು ತೊಡಕುಗಳಿಂದ ಮೂಲ ಅಂಕಪಟ್ಟಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯ ಹೆಸರು ನಮೂದಾಗಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಅನ್ಯಾಯದ ವಿರುದ್ಧ ಪೋಷಕರು ಒಂದಾಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಧ್ವನಿ ಎತ್ತಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಚಿವರು, ಶಾಸಕರು ಹಾಗೂ ನ್ಯಾಯಾಲಯದವರೆಗೂ ಮನವಿ ಸಲ್ಲಿಸಿ ಹೋರಾಟ ನಡೆಸಿದರು. ಪೋಷಕರು ಹಾಗೂ ಶಾಲಾಡಳಿತ ಮಂಡಳಿ ಅಧ್ಯಕ್ಷ ದೇವರಾಜ್ ರವರ ನಿರಂತರ ಒತ್ತಡ ಮತ್ತು ಹಠದ ಫಲವಾಗಿ, ಸುಮಾರು ನಾಲ್ಕು ತಿಂಗಳ ಹೋರಾಟದ ಬಳಿಕ ಅಂಕಪಟ್ಟಿ ಗೊಂದಲವನ್ನು ಬಗೆಹರಿಸಲು ಸಾಧ್ಯವಾಗಿದೆ.
ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಂಕಪಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಸಂಸ್ಥಾಪಕ ದೇವರಾಜ್ ಮಾತನಾಡಿ, “ಈ ಸಮಸ್ಯೆ ಪರಿಹಾರವಾಗಲು ಪೋಷಕರು ತೋರಿದ ಸಹನೆ, ಧೈರ್ಯ ಮತ್ತು ಹೋರಾಟವೇ ಮುಖ್ಯ ಕಾರಣ. ಇನ್ನು ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ,” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಲಗೋಡು ರತ್ನಾಕರ್ ಮಾತನಾಡಿ, “ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೈಗೊಂಡ ಹೋರಾಟ ಶ್ಲಾಘನೀಯ. ಅವರ ನಿರಂತರ ಪ್ರಯತ್ನದಿಂದಲೇ ಮಕ್ಕಳಿಗೆ ಅತ್ಯಂತ ಮಹತ್ವದ ಅಂಕಪಟ್ಟಿ ಸಿಕ್ಕಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಸ್ಪಂದಿಸಿದ ಕಲಗೋಡು ರತ್ನಾಕರ್ ಹಾಗೂ ದೇವರಾಜ್ ಅವರನ್ನು ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂದನ್, ಹಿರಿಯಣ್ಣ ಭಂಡಾರಿ, ಪೋಷಕರು ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಏಕತೆಯಿಂದ ಹೋರಾಡಿದಾಗ ನ್ಯಾಯ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾನೂನಾತ್ಮಕ ಗೊಂದಲಗಳು ಮರುಕಳಿಸದಂತೆ ಸಂಬಂಧಪಟ್ಟವರು ಎಚ್ಚರ ವಹಿಸಬೇಕೆಂಬುವುದೇ ಪೋಸ್ಟ್‌ಮ್ಯಾನ್ ನ್ಯೂಸ್ ನ ಆಶಯ…
2024 -25 ನೇ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ ರಿಪ್ಪನ್ ಪೇಟೆಯ ೧೦ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ನೊಂದಣಿ ಮತ್ತು ಶುಲ್ಕ ಪಾವತಿಯು ಶ್ರೀ ರಾಮಕೃಷ್ಣ ವಿದ್ಯಾಲಯದ ಹೆಸರಲ್ಲೆ ಆಗಿದ್ದು,ಪ್ರವೇಶ ಪತ್ರದಲ್ಲಿಯೂ ಶಾಲೆಯ ಹೆಸರೇ ಇರುತ್ತದೆ ಆದರೆ ಮೂಲ ಅಂಕಪಟ್ಟಿಯಲ್ಲಿ ಕೆಲವು ಕಾನೂನು ತೊಡಕುಗಳಿಂದ ಸರ್ಕಾರಿ ಪ್ರೌಢ ಶಾಲೆಯ ಹೆಸರು ನಮೂದಾಗಿದ್ದು ಇದನ್ನು ಸರಿಪಡಿಸಲು ಶಾಲಾ ಮಂಡಳಿಯೂ ಸತತ ಪರಿಶ್ರಮದಿಂದ ಸಾಧ್ಯವಾಗಿದೆ . ನಮ್ಮ ಶಾಲೆಯ ಪ್ರತಿಭೆಗಳ ಶೈಕ್ಷಣಿಕ ಸಾಧನೆಯು ಸರ್ಕಾರಿ ಶಾಲೆಗಳ ಪಾಲಾಗಿದ್ದು ಅದನ್ನು ಸರಿಪಡಿಸುವ ಹೋರಾಟದಲ್ಲಿ ಸತ್ಯದಪರವಾಗಿ ಗೆಲುವು ನಮ್ಮದಾಗಿದೆ , ಇನ್ನು ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ
ದೇವರಾಜ್ ,ಶ್ರೀ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ
ನಿರಂತರವಾಗಿ ಶಿಕ್ಷಣ ಇಲಾಖೆಯವರೊಂದಿಗೆ ಹೋರಾಟ ನಡೆಸಿ ,ನ್ಯಾಯಾಲಯದ ಮೊರೆಯನ್ನಿಟ್ಟಿದ್ದ ಶಾಲಾ ಆಡಳಿತ ಮಂಡಳಿಯು ಸುಮಾರು 4 ತಿಂಗಳ ಹೋರಾಟದ ಮೂಲಕ ಅಂಕಪಟ್ಟಿಯನ್ನು ವಿತರಿಸಿದೆ.ಮಕ್ಕಳ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾಗಿರುವ ಅಂಕ ಪಟ್ಟಿಯನ್ನು ದೊರಕಿಸುವಲ್ಲಿ ಶಾಲಾ ಆಡಳಿತ ಮಂಡಳಿಯೂ ಸಫಲವಾಗಿದೆ.
ಕಲಗೋಡು ರತ್ನಾಕರ್ ,ಶಿವಮೊಗ್ಗ ಜಿಪಂ ಮಾಜಿ ಉಪಾಧ್ಯಕ್ಷರು













