



ಫೆಬ್ರವರಿ 3ರಿಂದ ಸಾಗರ ಮಾರಿಕಾಂಬಾ ದೇವಿ ಜಾತ್ರೆ – ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾಹಿತಿ
ಸಾಗರ: ಪ್ರತಿ ಮೂರುವರ್ಷಕ್ಕೊಮ್ಮೆ ಸಕಲ ವಿಧಿ-ವಿಧಾನಗಳೊಂದಿಗೆ ಸಮಸ್ತ ಭಕ್ತಾಧಿಗಳು ಒಟ್ಟಾಗಿ ಸೇರಿ ನಡೆಸುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಬರುವ ಫೆಬ್ರವರಿ 3ರಿಂದ ಆರಂಭವಾಗಿ 11ರವರೆಗೆ ಜರುಗಲಿದೆ. 9 ದಿನಗಳಕಾಲ ನಡೆ ಯುವ ದೇವಿಯ ಜಾತ್ರೆ ರಾಜ್ಯದ ಅತೀದೊಡ್ಡ ಜಾತ್ರೆಯಲ್ಲಿ ಒಂದು ಎನ್ನುವ ಪ್ರಸಿದ್ದಿ ಪಡೆದಿದೆ. ಎಂದು ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಿಳಿಸಿದರು.
ಇಲ್ಲಿನ ಶ್ರೀ ಮಾರಿಕಾಂಬಾ ಗಂಡನ ಮನೆ ದೇವಸ್ಥಾನದ ಎದುರು ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಸೋಮವಾರ ಬಣ್ಣ ಹೊಡೆಯುವ ಶಾಸ್ತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಮಾರಿಕಾಂಬಾ ದೇವಸ್ಥಾನಗಳ ಸಮುಚ್ಚಯಕ್ಕೆ ಬಣ್ಣ ಬಳಿಯಲು ಕರೆಯ ಲಾದ ಟೆಂಡರ್, ಶಾಸಕ ಬೇಳೂರು ಗೋಪಾಲ ಕೃಷ್ಣ ಅವರ ಸಮ್ಮುಖದಲ್ಲಿ ತೆರೆದು ಯಶಸ್ವಿ ಬಿಡ್ಡುದಾರರಿಗೆ ನೀಡಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್ ಮಾತನಾಡಿ, ಈಗಾಗಲೆ ಶಾಸಕರ ನೇತೃತ್ವದಲ್ಲಿ ಜಾತ್ರೆ ಸಂಬಂಧ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಬಣ್ಣ ಹೊಡೆಯುವುದು ಸೇರಿದಂತೆ ಕೆಲವು ಅಗತ್ಯ ಟೆಂಡರ್‌ಗಳನ್ನು ಕರೆದು ಜಾತ್ರೆ ಪೂರ್ವಭಾವಿ ಸಿದ್ಧತೆ ನಡೆಸಲಾಗುತ್ತಿದೆ.
ಡಿ. 23ರಂದು ಮರ ಕಡಿಯುವ ಶಾಸ್ತ್ರವಿದ್ದು, ಜ. 27ರಂದು ಅಂಕೆ ಹಾಕಲಾಗುತ್ತದೆ. ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಬೇಕಾದ ವ್ಯವಸ್ಥೆ ಸಮಿತಿ ಮಾಡಿಕೊಳ್ಳುತ್ತಿದೆ. ಸರ್ವರೂ ಮಾರಿ ಕಾಂಬಾ ಜಾತ್ರೆ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗೋಪುರ ಸಮಿತಿ ಸಂಚಾಲಕ ಪುರುಷೋತ್ತಮ ಮಾತನಾಡಿ, ಜಾತ್ರೆಗೆ ಪೂರ್ವಭಾವಿಯಾಗಿ ಗೋಪುರಗಳಿಗೆ, ದೇವಸ್ಥಾನ, ಮಾರಿಕಾಂಬ ರುದ್ರಭೂಮಿಗೆ ಬಣ್ಣ ಹೊಡೆಯುವ ಕೆಲಸಕ್ಕೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ. ಶಾಸಕರ ನೇತೃತ್ವದಲ್ಲಿ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಿದರು.
ದೇವಸ್ಥಾನ ಸಮಿತಿ, ಸುಂದರ ಸಿಂಗ್, ತಾರಾಮೂರ್ತಿ, ಚಂದ್ರು ಆರ್., ನವೀನ್ ಕೆ.ಸಿ., ನಾರಾಯಣ ಆರಮನಕೇರಿ, ಸಂತೋಷ್ ಕೆ.ಜಿ.. ಕೃಷ್ಣಮೂರ್ತಿ ಎಸ್.ವಿ., ಶಶಿಕಾಂತ್, ಜಯಂತಿ ಗಣಪತಿ ಇನ್ನಿತರರು ಹಾಜರಿದ್ದರು.