ಪರೀಕ್ಷೆ ಮುಗಿದ ದಿನವೇ ಫಲಿತಾಂಶ: ಜಾನಪದ ವಿಶ್ವವಿದ್ಯಾಲಯ ಬರೆಯಿತು ಹೊಸ ದಾಖಲೆ
ಶಿಗ್ಗಾಂವ : “ಪರೀಕ್ಷೆ ಬರೀತೀವಿ… ಆದರೆ ಫಲಿತಾಂಶ ಯಾವಾಗ?” ಅಂದುಕೊಂಡು ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಕಾಯುತ್ತಿದ್ದ ದಿನಗಳು ಇದೀಗ ಇತಿಹಾಸ. ಶೀಘ್ರ ಫಲಿತಾಂಶ ಇಲ್ಲದಿದ್ದರೆ ಶಿಷ್ಯವೇತನ ಅರ್ಜಿ, ಬಸ್ ಪಾಸ್ ನವೀಕರಣ ಸೇರಿದಂತೆ ಹಲವು ಕಾರ್ಯಗಳು ಅಡಚಣೆಯಾಗುತ್ತವೆ ಎಂಬ ವಿದ್ಯಾರ್ಥಿಗಳ ಬೇಸರಕ್ಕೆ ಈಗ ಅಂತ್ಯ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಈ ಬಾರಿ ದಾಖಲೆಯ ವೇಗದಲ್ಲಿ ಫಲಿತಾಂಶ ಪ್ರಕಟಿಸಿ ಹೊಸ ಮಾನದಂಡ ನಿರ್ಮಿಸಿದೆ.
ಪరీక్షೆ ಮುಗಿದ ಕೇವಲ 3 ಗಂಟೆಗಳಲ್ಲಿ ಆರು ವಿಭಾಗಗಳ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವ ಮೂಲಕ ವಿಶ್ವವಿದ್ಯಾಲಯ ತನ್ನ ಆಡಳಿತ ಮತ್ತು ಕಾರ್ಯಪಟುತೆಯನ್ನು ಸಾಬೀತುಪಡಿಸಿದೆ.
ಮೌಲ್ಯಮಾಪನಕ್ಕೆ ಹೊಸ ಚೈತನ್ಯ ತುಂಬಿದ ಕುಲಸಚಿವ ಡಾ. ಶಿವಶಂಕರ್
ಇತ್ತಿಚೆಗಷ್ಟೇ ಮೌಲ್ಯಮಾಪನ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಡಾ. ಕೆ. ಶಿವಶಂಕರ್ ಅವರ ಕಾರ್ಯನಿಷ್ಠತೆ, ಯೋಜನೆ ಮತ್ತು ಸಿಬ್ಬಂದಿಯನ್ನು ಪ್ರೇರೇಪಿಸುವ ಶೈಲಿ ಮೌಲ್ಯಮಾಪನ ವಿಭಾಗಕ್ಕೆ ಹೊಸ ಚಲನೆಯನ್ನು ತಂದಿದೆ.
2024–25ನೇ ಸಾಲಿನ 2ನೇ ಮತ್ತು 4ನೇ ಚತುರ್ಮಾಸಿಕ ಪರೀಕ್ಷೆಗೆ ಮುನ್ನವೇ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಗುರಿ ನಿಗದಿಪಡಿಸಿದ ಡಾ. ಶಿವಶಂಕರ್ ಅವರು ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಿ ಉಪನ್ಯಾಸಕರನ್ನು ಸಜ್ಜುಗೊಳಿಸಿದ್ದರು.
ಅದರಂತೆ ಉಪನ್ಯಾಸಕರು ಪರೀಕ್ಷೆ ಮುಗಿದ ದಿನವೇ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದರು. ಮೌಲ್ಯಮಾಪನ ಸಿಬ್ಬಂದಿಯೂ ತಕ್ಷಣವೇ ಅಂಕಗಳನ್ನು ಯುಯುಸಿಎಂಎಸ್ (UU CMS) ತಂತ್ರಾಂಶದಲ್ಲಿ ದಾಖಲಿಸಿದರು.
3 ಗಂಟೆಗಳಲ್ಲಿ ಪ್ರಕಟವಾದ ಫಲಿತಾಂಶ
ಪರೀಕ್ಷೆ ಬರೆಯುತ್ತಿದ್ದ ಜನಪದ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕನ್ನಡ ಮತ್ತು ಜನಪದ, ಎಂ.ಬಿ.ಎ RTM, ಎಂ.ಬಿ.ಎ ಪ್ರವಾಸೋದ್ಯಮ ವಿಭಾಗಗಳ ದ್ವಿತೀಯ ಸೆಮಿಸ್ಟರ್ ಫಲಿತಾಂಶ ಹಾಗೂ ಎಂ.ಎ ಜನಪದ ವಿಜ್ಞಾನ ವಿಭಾಗದ ದ್ವಿತೀಯ ಮತ್ತು ಚतुರ್ಥ ಸೆಮಿಸ್ಟರ್ ಫಲಿತಾಂಶ ಪರೀಕ್ಷೆಯ 3 ಗಂಟೆಗಳಲ್ಲಿ ಪ್ರಕಟಿಸಲಾಯಿತು.
ಈ ಬಾರಿ ಒಟ್ಟು 460 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಕುಲಪತಿಗಳ ಶ್ಲಾಘನೆ
ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅವರು ಈ ಸಾಧನೆಯನ್ನು ಶ್ಲಾಘಿಸಿ,
“ಪರೀಕ್ಷೆ ಮುಗಿದ ದಿನದಂದೇ ಫಲಿತಾಂಶ ಪ್ರಕಟಿಸಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯ. ಇದು ವಿದ್ಯಾರ್ಥಿ-ಕೇಂದ್ರಿತ ಕಾರ್ಯದ ಸ್ಪಷ್ಟ ಉದಾಹರಣೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುಲಸಚಿವರ ಪ್ರತಿಕ್ರಿಯೆ
ಡಾ. ಶಿವಶಂಕರ್ ತಿಳಿಸಿದ್ದಾರೆ:
“ಇದು ದಾಖಲೆ ಮಾತ್ರವಲ್ಲ, ವಿಶ್ವವಿದ್ಯಾಲಯದ ಸಾಮರ್ಥ್ಯವನ್ನು ತೋರಿಸುವ ಕೆಲಸ. ಉಪನ್ಯಾಸಕರು ಹಾಗೂ ತಾಂತ್ರಿಕ ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕುತನದಿಂದ ಕೆಲಸ ಮಾಡುವುದಕ್ಕೆ ಇದು ಪ್ರೇರಣೆ.”
—
ವರದಿ: ನಿಂಗರಾಜ್ ಕುಡಲ್, ಹಾವೇರಿ ಜಿಲ್ಲೆ – ಬಂಕಾಪುರ