ರಿಪ್ಪನ್ ಪೇಟೆಯ ಅನಂತಮೂರ್ತಿ ಜವಳಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ | ಜಿನೋಮ್ ಸೇವಿಯರ್ ಅವಾರ್ಡ್ ಗೆ ಭಾಜನ | ಹಳದಿ ರುದ್ರಾಕ್ಷಿ ಹಲಸಿನ ಪ್ರಭೇದ ಸಂರಕ್ಷಣೆಗೆ ಮಾನ್ಯತೆ
ರಿಪ್ಪನ್ ಪೇಟೆ: ನವದೆಹಲಿಯಲ್ಲಿ ಬುಧವಾರ ನಡೆದ ಸಸ್ಯ ಪ್ರಭೇದಗಳ ಮತ್ತು ರೈತರ ಹಕ್ಕು ಪ್ರಾಧಿಕಾರದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ‘ಜಿನೋಮ್ ಸೇವಿಯರ್ ‘ ಪ್ರಶಸ್ತಿಯನ್ನು ಅನಂತಮೂರ್ತಿ ಜವಳಿಯವರಿಗೆ ನೀಡಿ ಸನ್ಮಾಸಿ ಅಭಿನಂದಿಸಿದ್ದಾರೆ.

ಭಾರತ ಸರಕಾರವು ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಗುರುತಿಸಿ, ಕೇಂದ್ರ ಕೃಷಿ ಸಚಿವಾಲಯ ದಿಂದ ಗೌರವಿಸ್ಪಡುವ ಸಸ್ಯ ಪ್ರಭೇದ ಸಂರಕ್ಷಕ ರಾಷ್ಟ್ರೀಯ ಪ್ರಶಸ್ತಿಗೆ ರಿಪ್ಪನ್ ಪೇಟೆಯ ರೈತ ಅನಂತಮೂರ್ತಿ ಜವಳಿ ಅವರು ಭಾಜನರಾಗಿದ್ದಾರೆ. ಇವರು ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಅಂಕುರ್ ಕೃಷಿಕ್ಷೇತ್ರದ ಮೂಲಕ 27 ವರ್ಷಗಳಿಂದ ಸಸ್ಯ ಸಂರಕ್ಷಣೆ , ಪೋಷಣೆ ಮತ್ತು ರೈತರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆ ಮತ್ತು ಸಾಧನೆಯನ್ನು ಗುರುತಿಸಿದ ಕೇಂದ್ರ ಕೃಷಿ ಸಚಿವಾಲಯ ಮತ್ತು “ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ” ವು ವಿವಿಧ ಸಸ್ಯಗಳ ಅಭಿವೃದ್ಧಿ ಹಾಗೂ ವಿಶೇಷವಾಗಿ ‘ಹಳದಿ ರುದ್ರಾಕ್ಷಿ ಹಲಸಿನ ಹಣ್ಣಿನ’ ತಳಿ ಸಂರಕ್ಷಣೆಗಾಗಿ ಅನಂತಮೂರ್ತಿ ಜವಳಿ ಅವರಿಗೆ 2022-23 ಸಾಲಿನ ರಾಷ್ಟ್ರೀಯ ಪ್ರಶಸ್ತಿಯಾದ ‘ಜಿನೋಮ್ ಸೇವಿಯರ್ ಅವಾರ್ಡ್’ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರದ ಸಂಸ್ಥೆಯಾಗಿರುವ ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು ಹೊಸ ಸಸ್ಯ ಪ್ರಭೇದಗಳ ಅಭಿವೃದ್ಧಿ ಮತ್ತು ರೈತರ ಹಕ್ಕುಗಳ ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತದೆ.
ಸಾಧಕರ ಪರಿಚಯ:
ಅನಂತಮೂರ್ತಿ ಜವಳಿ ಅವರು ಬಿ.ಇ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿರುವ ಅವರು ಅಧ್ಯಾಪಕರಾಗಿ, ಕೆಪಿಟಿಸಿಎಲ್ ನಲ್ಲಿ 17 ವರ್ಷ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದು ಬಳಿಕ ಕೃಷಿ ಮತ್ತು ತೋಟಗಾರಿಕೆ ,ಸಸ್ಯ ಸಂರಕ್ಷಣೆ ,ತಳಿ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಡರು.ಜಿಲ್ಲೆಯ ನಾನಾ ಭಾಗದ ರೈತರಿಗೆ ಕೃಷಿಗೆ ಸಂಬಂಧಿಸಿದ ಲಾಭದಾಯಕ ಕೃಷಿ,ತೋಟಗಾರಿಕೆಯ ಬಗ್ಗೆ ಮಾಹಿತಿಯನ್ನು ನೀಡುವ ಸಂಪನ್ಮೂಲ ವ್ಯಕ್ತಿಯಾಗಿಯೂ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವ ಇವರ ಸಜ್ಜನಿಕೆಯಿಂದ ಊರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಅಂಕುರ್ ಕೃಷಿಕ್ಷೇತ್ರ:
ಅಂಕುರ್ ಕೃಷಿ ಕ್ಷೇತ್ರ 13 ಎಕರೆ ಭೂಮಿಯಲ್ಲಿ ಸಸ್ಯ ಪ್ರಭೇದಗಳ ಅಭಿವೃದ್ಧಿ,ಪ್ರಯೋಗದಂತಹ ಹಾಗೂ ರೈತರ ಮಾಹಿತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಅಂಕುರ್ ಸಸ್ಯ ಕ್ಷೇತ್ರದಲ್ಲಿ 50 ರೀತಿಯ ಹಲಸಿನ ತಳಿ, 50 ಮಾವಿನ ಹಣ್ಣಿನ ತಳಿ,10ಕ್ಕೂ ಹೆಚ್ಚು ಸಂರಕ್ಷಿತ ಅಪ್ಪೆ ಮಾವಿನ ಮಿಡಿ ತಳಿ ಹಾಗೂ ದೇಶ ವಿದೇಶದ ಹಣ್ಣುಗಳ 120ಕ್ಕೂ ಅಧಿಕ ಬಗೆಯ ಗಿಡಗಳ ಮಾರಾಟ ಮತ್ತು ಪ್ರದರ್ಶನ ಕೃಷಿಕ್ಷೇತ್ರದಲ್ಲಿ ಲಭ್ಯವಿದೆ. ಪತ್ನಿ ಅರ್ಚನ ಜವಳಿ,ಮಗ ಅಮೋಘ ಜವಳಿ, ಸೊಸೆ ಕೀರ್ತಿ ಭಟ್ ಸೇರಿದಂತೆ ಕುಟುಂಬ ಸಮೇತರಾಗಿ ಕೃಷಿಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ.
ಹಳದಿ ರುದ್ರಾಕ್ಷಿ ಹಲಸಿನ ಹಣ್ಣು:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವಂತಹ ಹಳದಿ ರುದ್ರಾಕ್ಷಿ ಹಲಸಿನ ಹಣ್ಣು ಒಂದು ಪ್ರಾದೇಶಿಕ ತಳಿಯಾಗಿದೆ.ನೈಸರ್ಗಿಕವಾಗಿ ಮತ್ತು ವಿವಿಧ ಕಾರಣದಿಂದಾಗಿ ಈ ತಳಿ ನಶಿಸಿಹೋಗುವಂತಹ ಸ್ಥಿತಿಯಲ್ಲಿದೆ. ಅಂತಹ ಹಲಸಿನ ತಳಿಯನ್ನು ಜವಳಿ ಅವರು ಅಭಿವೃದ್ಧಿ ಪಡಿಸಿ ಉಳಿಸಿದ್ದಾರೆ.
ಈ ಹಳದಿ ರುದ್ರಾಕ್ಷಿ ಹಣ್ಣು ಹೆಸರಿನಲ್ಲಿದಂತೆಯೇ ರುದ್ರಾಕ್ಷಿ ರೀತಿಯಲ್ಲಿ ಚೆಂಡಿನಂತೆ ಕಂಡುಬರುತ್ತದೆ. ಸುಮಾರು 500 ಗ್ರಾಂ ನಿಂದ 3 ಕೆ.ಜಿ ವರೆಗೆ ಬೆಳೆಯುತ್ತದೆ. ಸುಮಾರು ಶೇ.80 ತಿನ್ನಲು ಯೋಗ್ಯವಾದ ತೊಳೆ ಹೊಂದಿರುತ್ತದೆ. ಅತ್ಯಂತ ರುಚಿಕರ ,ಸುಹಾಸನೆ ಭರಿತ ಹಲಸಿನ ಹಣ್ಣು ಇದಾಗಿದ್ದು. ಈ ಹಲಸು ಪ್ರಭೇದ ಸಂರಕ್ಷಣೆಯನ್ನು ಮಾಡಿರುತ್ತಾರೆ.
ಪ್ರಸಿದ್ಧ ಹೊಳೆಸಾಲು ಅಪ್ಪೆ ಮಾವಿನ ಮಿಡಿ:
ರಿಪ್ಪನ್ ಪೇಟೆ – ಅರಸಾಳು ಭಾಗದ ಹೊಳೆ ಸಾಲು ಅಪ್ಪೆ ಮಿಡಿ ಉಪ್ಪಿನಕಾಯಿ ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ. ನೈಸರ್ಗಿಕವಾಗಿ ಬೆಳೆದ 200 -300 ಹಳೆ ಅಪ್ಪೆಮಿಡಿ ತಳಿಗಳ ಮರಗಳು ಇಂದು ಹೊಳೆಸಾಲಿನಲ್ಲಿ ಅಕ್ರಮ ಮರಳುಗಾರಿಕೆ ಯಿಂದ ಮತ್ತು ಅನೇಕ ಕಾರಣಗಳಿಂದ ನಶಿಸಿಹೊಗುತ್ತಿರುವುದು ದುರಂತ ಸರ್ಕಾರವು ಅದನ್ನು ರಕ್ಷಿಸುವಂತಹ ಯೋಜನೆಯನ್ನು ತರುವುದು ಅವಶ್ಯವಾಗಿದೆ.
ಜವಳಿ ಅವರು ಪ್ರಸಿದ್ಧ 10ಕ್ಕೂ ಮಿಗಿಲು ಅಪ್ಪೆ ಮಾವಿನ ಮಿಡಿ ತಳಿಗಳನ್ನು ಸಂರಕ್ಷಿಸಿ ,ತಳಿ ಅಭಿವೃದ್ಧಿಯನ್ನು ಮಾಡಿದ್ದಾರೆ. ಮಲೆನಾಡು ಭಾಗದ ರೈತರು ಇಂದು ಅಡಿಕೆಗೆ ಪರ್ಯಾಯ ಲಾಭದಾಯಕ ಬೆಳೆಯನ್ನಾಗಿ ಅಪ್ಪೆಮಿಡಿಯನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಜವಳಿ ಅವರ ಅಭಿಪ್ರಾಯವಾಗಿದೆ.



