RIPPONPETE | ಬೈರಾಪುರದಲ್ಲಿ ಪಂಚಲೋಹ ದೇವರ ಮೂರ್ತಿಗಳ ಕಳವು ,ಗ್ರಾಮಸ್ಥರಲ್ಲಿ ಆತಂಕ, ನೋನಿ ಸಂಪ್ರದಾಯಕ್ಕೆ ಧಕ್ಕೆ!!
ರಿಪ್ಪನ್‌ಪೇಟೆ : ಬೆನವಳ್ಳಿ ಗ್ರಾಮದ ವ್ಯಾಪ್ತಿಯ ಮುಡುಬ ಬೈರಾಪುರ ಭಾಗದಲ್ಲಿ ಭೂಮಿಗಡಿಯಲ್ಲಿ ಪರಂಪರೆಯಾಗಿ ಪ್ರತಿಷ್ಠಾಪಿಸಲಾಗಿದ್ದ ಪಂಚಲೋಹದ ದೇವರ ಮೂರ್ತಿಗಳು ಕಳವಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಪ್ರತಿವರ್ಷ ದೀಪಾವಳಿ ಹಬ್ಬದ ನೋನಿ ಆಚರಣೆಯ ಅಂಗವಾಗಿ ಗ್ರಾಮಸ್ಥರು ಬನಕ್ಕೆ ತೆರಳಿ ಕಳೆದ ವರ್ಷ ಮಡಿಕೆಯಲ್ಲಿ ಇಟ್ಟು ಭೂಮಿಗೆ ಮುಚ್ಚಿ ಇರಿಸಿದ್ದ ಮೂರ್ತಿಗಳನ್ನು ಹೊರತೆಗೆದು ಪೂಜೆ ಸಲ್ಲಿಸುವುದು ಪರಂಪರೆಯಾಗಿತ್ತು , ಇದೇ ಪ್ರಕಾರ ಅದರಂತೆ ಭಾನುವಾರ ಪೂಜೆ ಸಲ್ಲಿಸಲು ಹೋದ ವೇಳೆ, ಮಡಿಕೆಯೊಳಗಿನ ಮೂರ್ತಿಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಗ್ರಾಮಸ್ಥರು ಕಳವಾಗಿರುವ ಮೂರ್ತಿಗಳಲ್ಲಿ , ಮೂರು ಕುದುರೆ ರೂಪದ ಪಂಚಲೋಹ ಮೂರ್ತಿಗಳು ,ಗ್ರಾಮದೇವರ ಮನುಷ್ಯ ರೂಪದ ಮೂರ್ತಿ , ಮೂರ್ತಿಯ ಹಿಂಬಾಗದ ಪ್ರಭಾವಳಿ ಹಾಗೂ ಛತ್ರಿ ಸೇರಿ ಒಟ್ಟು ಸುಮಾರು 5 ಕೆ.ಜಿಯಷ್ಟು ತೂಕದ ವಿಗ್ರಹಗಳಿವೆ.
ಘಟನೆ ತಿಳಿದ ಗ್ರಾಮ ಹಿರಿಯರಲ್ಲಿ ಆತಂಕ ಉಂಟಾಗಿದ್ದು, “ಸಂಪ್ರದಾಯ ವ್ಯತ್ಯಯವಾಗಬಾರದು” ಎಂಬ ಕಾರಣದಿಂದ ಗುರುಗಳ ಸಲಹೆ ಮೇರೆಗೆ ತಾತ್ಕಾಲಿಕವಾಗಿ ಕಳಸ ಹೂಡಿ ಪೂಜೆ ನೆರವೇರಿಸಲಾಗಿದೆ. ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಆಚರಣೆಗೆ ಧಕ್ಕೆ ಉಂಟಾಗಿ ಭಕ್ತರಲ್ಲಿ ಬೇಸರ ವ್ಯಕ್ತವಾಗಿದೆ.
ಕಳವಾದ ಮೂರ್ತಿಗಳನ್ನು ತಕ್ಷಣ ಪತ್ತೆ ಮಾಡುವಂತೆ ಬೈರಾಪುರ – ಮುಡುಬ ಮಜರೆ ಗ್ರಾಮದ ಗ್ರಾಮಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.