ಗಾಂಜಾ ಮಾರಾಟ – ಇಬ್ಬರಿಗೆ ಮೂರು ವರ್ಷ ಶಿಕ್ಷೆ, ದಂಡ
ಶಿವಮೊಗ್ಗ : ಇಲ್ಲಿನ ನ್ಯಾಯಾಲಯ ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಿದೆ.
ಶಿವಮೊಗ್ಗ ಸಾಗರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 04-08-2021 ರಂದು ನಡೆದ ಪ್ರಕರಣ ಇದಾಗಿದೆ. ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಅಂದಿನ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ವೇಳೆ ಒಟ್ಟು 1 ಕೆ.ಜಿ 60 ಗ್ರಾಂ ಒಣ ಗಾಂಜಾ, ₹800 ರೂಪಾಯಿ ಕ್ಯಾಶ್ ಹಾಗೂ ಮಾರುತಿ ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪಿಎಸ್ಐ ಸಾಗರ್ ಕರ್ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ದಲ್ಲಿ ವಿಚಾರಣೆ ನಡೆದಿತ್ತು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರು ಸುರೇಶ್ ಕುಮಾರ್ ಎ.ಎಂ ರವರು ವಾದ ಮಾಡಿದ್ದರು. ಇದೀಗ ವಿಚಾರಣೆ ಮುಗಿದು ನ್ಯಾಯಾಧೀಶರಾದ ಮಂಜುನಾಥ ನಾಯಕ್ ರವರು ಪ್ರಕರಣ ತೀರ್ಪು ನೀಡಿದ್ದಾರೆ. ತಮ್ಮ ತೀರ್ಪಿನಲ್ಲಿ ಆರೋಪಿಗಳಾದ ಇಮ್ರಾನ್ ಖಾನ್ (25 ವರ್ಷ, ಸಾಗರ ಟೌನ್) ಮತ್ತು ಇಮ್ತಿಯಾಜ್ (28 ವರ್ಷ, ಸಾಗರ ಟೌನ್) ಇಬ್ಬರಿಗೂ ತಲಾ 3 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ₹25,000 ದಂಡ ವಿಧಿಸಿ ಶಿಕ್ಷೆ ನೀಡಿದ್ದಾರೆ.


