Headlines

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ

ಹಾಸ್ಯ ನಟ, ಹಿರಿಯ ರಂಗ ಕಲಾವಿದ ರಾಜು ತಾಳಿಕೋಟೆ ನಿಧನ – ಶೂಟಿಂಗ್ ನಲ್ಲಿದ್ದಾಗಲೇ ನಡೆಯಿತು ದುರಂತ

ಹಾಸ್ಯ ಕಲಾವಿದ, ತಮ್ಮ ಕಾಮಿಡಿ ಮೂಲಕವೇ ಉತ್ತರ ಕರ್ನಾಟಕದಲ್ಲಿ ನಗುವಿನ ಹೊನಲು ಹರಿಸಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ನಗುವಿನ ಹುಚ್ಚು ಹಿಡಿಸಿದ್ದ, ಕಲಿಯುಗದ ಕುಡುಕ ಖ್ಯಾತಿಯ ನಟ ರಾಜು ತಾಳಿಕೋಟೆ ಮೃತಪಟ್ಟಿದ್ದಾರೆ.

ಉಡುಪಿಯ ಮಣಿಪಾಲ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಟ ಶೈನ್ ಶೆಟ್ಟಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ರಾಜು ತಾಳಿಕೋಟೆ, ಸಿನಿಮಾ ಶೂಟಿಂಗ್​ ಗೆ ಬಂದಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ತಾಳಿಕೋಟೆ ಜೀವನವೇ ರೋಚಕ ;

ರಾಜು ತಾಳಿಕೋಟೆಯವರ ಜೀವನವೇ ಬಲು ರೋಚಕ ಅವ್ರ ಹುಟ್ಟಿನಿಂದ ಹಿಡಿದು, ನಿಧನದವರೆಗೆ ಜೀವನದಲ್ಲಿ ಕಂಡ ಏರಿಳಿತಗಳ ಬಗ್ಗೆ ಸಕಲ ಮಾಹಿತಿ ಕೊಡ್ತೀವಿ ನೋಡಿ..

ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ ‘ರಾಜು ತಾಳಿಕೋಟೆ’ ಆಗಿದ್ದೆಂಗೆ

ನಾವು ಅಂದುಕೊಂಡಂತೆ ಆ ಕಲಾವಿದನ ಅಸಲಿ ಹೆಸರು ರಾಜು ತಾಳಿಕೋಟೆ ಅಲ್ಲ.. ರಾಜೇಸಾಬ ಮಕ್ತುಮ್ ಸಾಬ್ ಯೆಂಕಂಚಿ.

ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ ರಾಜು ತಾಳಿಕೋಟೆ ಆಗಿದ್ದೇ ರೋಚಕ. ಆದರೆ, ಜನ ಅವರನ್ನು ರಾಜು ರಾಜು ಎಂದೆ ಶಾರ್ಟ್‌ಕಟ್‌ನಲ್ಲಿ ಕರೆಯಲು ಆರಂಭಿಸಿದರು. ಆಗ ಸರ್‌ ನೇಮ್‌ ಆದ ಯೆಂಕಂಚಿಯನ್ನು ಬದಿಗಿಟ್ಟು ಅವರ ಊರ ಹೆಸರಾದ ತಾಳಿಕೋಟೆಯನ್ನು ಸೇರಿಸಿಕೊಂಡ್ರು. ಆಗಿನಿಂದ ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ ರಾಜು ತಾಳಿಕೋಟೆ ಆದರು.

ರಾಜು ತಾಳಿಕೋಟೆ ತಂದೆ ತಾಯಿ ಇಬ್ಬರೂ ರಂಗಭೂಮಿ ಕಲಾವಿದರು. ಅವರದ್ದೇ ಒಂದು ನಾಟಕ ಸಂಘ ಕೂಡ ಇತ್ತು.

ಮುಸ್ಲಿಂ ಆಗಿದ್ದರೂ ಮಠದಲ್ಲಿ ಓದಿದ್ದ ರಾಜು

ರಾಜು ತಾಳಿಕೋಟೆ ಬಾಲ್ಯದ ವಿದ್ಯಾಭ್ಯಾಸ ಎಲ್ಲವೂ ಆಗಿದ್ದು ಮಠದಲ್ಲಿ. ಮುಸ್ಲಿಂ ಆಗಿದ್ದರೂ, ಮಠದಲ್ಲಿ ಓದುತ್ತಿದ್ದ ಕಾರಣ ಅಲ್ಲಿಯ ರೀತಿ ನೀತಿಯಂತೇ ಅನುಸರಿಸುತ್ತಿದ್ದರು. ವಿಭೂತಿ ಹಚ್ಚಿಕೊಂಡು ಊಟ ಮಾಡಬೇಕಿತ್ತು. ವಚನಗಳ ಅಭ್ಯಾಸ ಮಾಡಬೇಕಿತ್ತು. ನಾನು ಈಗಲೂ ಕೂಡ ನನ್ನ ಹಿಂದೂ ಸ್ನೇಹಿತರ ಮನೆಗೆ ಹೋದರೆ ವಿಭೂತಿ ಧಾರಣೆ ಮಾಡಿಯೇ ಊಟ ಮಾಡುತ್ತೇನೆ ಎಂದು ಹಲವು ಬಾರಿ ರಾಜು ತಾಳಿಕೋಟೆ ಹೇಳಿಕೊಂಡಿದ್ದಾರೆ.

ಕಲಿಯುಗದ ಕುಡುಕ ನಾಟಕ ಖ್ಯಾತಿಯ ರಾಜು ತಾಳಿಕೋಟೆ ಹುಟ್ಟಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಿಗಿ ಗ್ರಾಮದಲ್ಲಿ. ಕಾಲಾ ನಂತರದಲ್ಲಿ ತಾಳಿಕೋಟೆ ನಗರಕ್ಕೆ ಶಿಫ್ಟ್ ಆದರು, ಅಲ್ಲೇ ನೆಲೆ ಕಂಡುಕೊಂಡ್ರು. ಅಲ್ಲೇ ನಾಟಕ ಕಂಪನಿ ಸ್ಥಾಪಿಸಿದ್ರು. ಸುಮಾರು 300 ಕ್ಕೂ ನಾಟಕಗಳು ಹಾಗೂ 20 ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ರು.

ಲಾರಿ ಕ್ಲೀನರ್‌ ಆಗಿದ್ದ ರಾಜು

ರಾಜು ತಾಳಿಕೋಟೆ ಮಾಡದ ಕೆಲಸವಿಲ್ಲ. ರೋಡಿನಲ್ಲಿ ಚಕ್ಕಲಿ ಮಾರುವುದು, ಹೋಟೆಲ್ ಕ್ಲೀನರ್ ಆಗಿ, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹತ್ತು ಹಲವಾರು ಕೆಲಸ ಮಾಡಿದ್ದಾರೆ. ಅಷ್ಟೇ ಏಕೆ ರಾಜು ತಾಳಿಕೋಟೆ ಕೆಲ ಕಾಲ ಲಾರಿ ಕ್ಲೀನರ್‌ ಆಗಿ ಕೆಲಸ ಮಾಡಿ ಜೀವನ ಸಾಗಿದ್ದಾರೆ.

ನಾಟಕ ಮಂಡಳಿ ನಡೆಸುತ್ತಿದ್ದ ರಾಜು ತಾಳಿಕೋಟೆ

ರಾಜು ತಾಳಿಕೋಟೆ ಕೇವಲ ನಟನಲ್ಲ. ತಾಳಿಕೋಟಿಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರೂ ಆಗಿದ್ದರು. ರಾಜು ತಾಳಿಕೋಟೆ ಜೀವನದ ಬಹುಪಾಲು ಸಮಯವನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸುವುದರಲ್ಲಿಯೇ ಕಳೆದಿದ್ದರು. ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ ಎಂಬ ಹೆಸರಿನ ರಾಜು ತಾಳಿಕೋಟಿಯವರು ವಿಜಯಪುರದ ತಾಳಿಕೋಟೆಯಲ್ಲಿ ವಾಸವಾಗಿದ್ದರು. ತಾಳಿಕೋಟಿಯ ಪ್ರಸಿದ್ಧ ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರೂ ಆಗಿದ್ದರು.

ಕುಡುಕನ ಪಾತ್ರ ಮಾಡಿದ್ರೆ ಪಕ್ಕಾ ಕ್ಲಿಕ್

ರಾಜು ತಾಳಿಕೋಟಿಯವರು ಉತ್ತರ ಕರ್ನಾಟಕದ ಶೈಲಿಯ ಭಾಷೆ ಮತ್ತು ಉಡುಗೆ-ತೊಡುಗೆಯೊಂದಿಗೆ ಹಾಸ್ಯ ಮತ್ತು ಬೋಧಪ್ರದ ಎಂಬ ಪಾತ್ರಗಳನ್ನು ಮಾಡುತ್ತಿದ್ದರಿಂದ ಅಪಾರ ಜನಪ್ರಿಯತೆ ಗಳಿಸಿದ್ದರು.

ರಾಜು ತಾಳಿಕೋಟೆ ಕುಡುಕನ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುತ್ತಿದ್ದರು. ಅದರಲ್ಲೂ ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯ, ಮತ್ತು ಅಸಲಿ ಕುಡುಕ ನಾಟಕಗಲು ಸಖತ್ ಫೇಮಸ್ ಆಗಿದ್ದವು. ಈ ನಾಟಕಗಳ ಅಂದಿನ ಕಾಲದಲ್ಲಿ ಆಡಿಯೊ ಕ್ಯಾಸೆಟ್‌ಗಳು ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಮನೆ ಮಾತಾಗಿದ್ದವು.

ರಾಜು ತಾಳಿಕೋಟೆ ಸಿನಿ ಜೀವನ

ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ರಾಜು ತಾಳಿಕೋಟೆ ಅವರು ಸಕ್ರಿಯರಾಗಿದ್ದರು. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೇ, ರಾಜಧಾನಿ, ಅಲೆಮಾರಿ, ಮೈನಾ, ಟೋಪಿವಾಲಾ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7 ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.