ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ
ಗಾಳಿಬೈಲು ಗ್ರಾಮದಲ್ಲಿ ಈದ್ ಮಿಲಾದ್ ಸಂಭ್ರಮ
ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು.
ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗಾಳಿಬೈಲ್ ಗ್ರಾಮದಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನುದೇಶಿಸಿ ಅವರು ಮಾತನಾಡಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಬದಲಾವಣೆ ತರಬೇಕು ,ಮುಸಲ್ಮಾನರ ಮಕ್ಕಳೆಂದರೇ ಕೇವಲ ಪಂಚರ್ ಅಂಗಡಿ , ಗುಜುರಿ ಅಂಗಡಿ ಇಡುತ್ತಾರೆ ಎನ್ನುವುದು ಬದಲಾಗಲಿ ಉತ್ತಮ ಶಿಕ್ಷಣ ನೀಡಿ ನಿಮ್ಮಲ್ಲೂ ಐಪಿಎಸ್ ,ಐಎಎಸ್ ಮಾಡುವಂತಾಗಬೇಕು ಎಂದರು.
ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಭೇಧ ಭಾವ ಬರಲೇ ಬಾರದು ,ತಮ್ಮ ತಮ್ಮ ಧರ್ಮವನ್ನು ಆಚರಣೆ ಮಾಡುತ್ತಾ ಎಲ್ಲರನ್ನೂ ಗೌರವಿಸಬೇಕು,ನಾಡಿನಲ್ಲಿ ಕೆಲವರ ಸ್ವಾರ್ಥ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪುರಾತನದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗೂ ಸಹ ಎಂದಿಗೂ ಜಾತಿ-ಧರ್ಮದ ಹೆಸರಲ್ಲಿ ಸಂಘರ್ಷಗಳು ನಡೆದಿಲ್ಲ.ದ್ವೇಷ ಬಿಟ್ಟು ದೇಶ ಕಟ್ಟಬೇಕು. ವಿವೇಕದಿಂದ ವರ್ತಿಸಿ ಅವಿವೇಕತನವನ್ನು ತೊರೆಯಬೇಕು. ವಿಚಾರವಂತರಾಗಿ ವಿಕಾರತೆಯನ್ನು ತೊರೆಯಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಪ್ರಬಾಷಾಣಕಾರ ಅಬ್ದುಲ್ ಲತೀಪ್ ಸ ಅದಿ ಮಾತನಾಡಿ ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಗಳಿಂದ ಯಾವುದೇ ಧರ್ಮ ಉದ್ದಾರವಾಗಲು ಸಾಧ್ಯವಿಲ್ಲ, ದೇವರನ್ನು ನಂಬುವ ಮಂದಿ ಎಂದೂ ಅಶಾಂತಿಗೆ ಕಾರಣರಾಗುವುದಿಲ್ಲ. ದೇವರನ್ನು ನಂಬದ, ಧರ್ಮದ ಮೇಲೆ ಗೌರವ ಇಲ್ಲದ ನಕಲಿ ಧರ್ಮ ರಕ್ಷಕರು ಇಂದು ಸಮಾಜವನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಭಾರತ ದೇಶದಲ್ಲಿರುವ ಪ್ರತಿಯೊಬ್ಬರೂ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ಜಗತ್ತಿನಲ್ಲಿ ನಮ್ಮ ದೇಶ ಶಕ್ತಿಯುತವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೆಂಚನಾಲ ಗ್ರಾಪಂ ಸದಸ್ಯ ಪರಮೇಶ್ ಮಾತನಾಡಿ ಪ್ರತೀಯೊಬ್ಬ ನಾಗರಿಕನೂ ಅವರವರ ಧರ್ಮಕ್ಕನುಸಾರವಾಗಿ ಪರಸ್ಪರ ಪ್ರೀತಿಯಿಂದ ಬದುಕಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗಬಹುದು. ಮನುಷ್ಯರು ಮಾನವೀಯತೆಯಿಂದ ದೂರವಾಗುತ್ತಿದ್ದು ಪ್ರಾಣಿ, ಪಕ್ಷಿಗಳಿಂದ ನಾವು ಮಾನವೀಯತೆಯನ್ನು ಕಲಿಯಬೇಕಾದ ಸ್ಥಿತಿ ಎದುರಾಗಿದೆ. ದೇಶದ ಸಂವಿದಾನವನ್ನು ಪ್ರತೀಯೊಬ್ಬರು ಗೌರವಿಸಬೇಕು, ಕಾನೂನಿಗೆ ಗೌರವ ಕೊಡುವ ವ್ಯಕ್ತಿಗಳು ನಾವಾದರೆ ಎಲ್ಲ ಕಡೆಯೂ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕೆಡಿಪಿ ಸದಸ್ಯ ಆಸೀಫ಼್ ಭಾಷಾ ಮಾತನಾಡಿ ನಶ್ವರವಾದ ಈ ಶರೀರವನ್ನು ಅಮರವಾದ ಕೆಲಸಕ್ಕೆ ಬಳಸಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ಈ ಭೂಮಿಯ ಮೇಲೆ ನಮಗೆ ಬಹಳಷ್ಟು ತತ್ವ ಸಿದ್ದಾಂತಗಳನ್ನು ಅನೇಕ ಧರ್ಮಗುರುಗಳು , ಪ್ರವಾದಿಗಳು ಕೊಟ್ಟು ಹೋಗಿದ್ದಾರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸೌಹಾರ್ಧತೆಯ ಸಮಾಜ ಕಟ್ಟೋಣ ಎಂದರು.
ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಮಾತನಾಡಿ ಮನುಕುಲಕ್ಕೆ ಶಾಂತಿ, ಮಾನವೀಯತೆಯನ್ನು ಕಲಿಸಿಕೊಟ್ಟ ಪ್ರವಾದಿಯವರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅನುಷ್ಠಾನಕ್ಕೆ ತರುವಂತಹ ಕೆಲಸ ಮಾಡಿದಾಗ ಮಾತ್ರ ಎಲ್ಲರೂ ಉತ್ತಮ ಹಾಗೂ ಸೌಹಾರ್ಧಯುತವಾಗಿ ಬದುಕಲು ಸಾಧ್ಯವಾಗುತ್ತದೆ , ಮುಂದಿನ ದಿನಗಳಲ್ಲಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಸ್ಥಾನಕ್ಕೆರುವ ಮೂಲಕ ಈ ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಪಂ ಮಾಜಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ನಮ್ಮ ಸಮುದಾಯವು ಶೈಕ್ಷಣಿಕ ,ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ದಿ ಹೊಂದುತಿರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಗಾಳಿಬೈಲ್ ರಸ್ತೆಗೆ ಶಾಸಕ ಬೇಳೂರು ಗೋಪಾಲಕೃಷ್ಣ 40 ಲಕ್ಷ ಅನುದಾನ ನೀಡಿ ರಸ್ತೆ ನಿರ್ಮಿಸಲು ಸಹಕರಿಸಿದ್ದಾರೆ ಹಾಗೇಯೆ ಕೆಂಚನಾಲ ಗ್ರಾಪಂ ವ್ಯಾಪ್ತಿಯಲ್ಲಿ 3 ಕೋಟಿಗೂ ಅಧಿಕ ಅನುದಾನ ನೀಡುವ ಮೂಲಕ ಈ ಭಾಗದ ಅಭಿವೃದ್ದಿಗೆ ಶ್ರಮಿಸುತ್ತಿರುವ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಸಮೀವುಲ್ಲಾ ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಪ ಅಧ್ಯಕ್ಷ ಮಹಮ್ಮದ್ ಷರೀಫ್ , ಗ್ರಾಪಂ ಉಪಾಧ್ಯಕ್ಷೆ ಹೂವಮ್ಮ ಸದಸ್ಯರಾದ ಪುಟ್ಟಮ್ಮ , ಕೃಷ್ಣೋಜಿ ರಾವ್ , ಮುಖಂಡರಾದ ಈಶ್ವರಪ್ಪ ಗೌಡ , ಮಧುಸೂದನ್ , ಚಂದ್ರೇಶ್ , ರವೀಂದ್ರ ಕೆರೆಹಳ್ಳಿ , ತಾಹಿರ್ ಸಾಗರ , ಮಂಜುನಾಥ್ ಮಾದಾಪುರ , ಜಾವೀದ್ ಜಿ ಕೆ , ಸೈಪ್ಫ಼ುಲ್ಲಾ ,ಶಬ್ಬೀರ್ ಸಾಬ್ , ಖಲೀಲ್ ಷರೀಫ್ ಹಾಗೂ ಈದ್ ಮಿಲಾದ್ ಸದಸ್ಯರಾದ ಆಸೀಫ಼್ , ಜಬೀವುಲ್ಲಾ ಇದ್ದರು.


