HUMACHA | ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಕಳೇಬರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ
ತೋಟವೊಂದರ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂಬರ 52 /2 ರ ರಾಮಪ್ಪ ಬಿನ್ ಮರಿಯಪ್ಪ ಎಂಬುವವರ ಅಡಿಕೆ ತೋಟದ ಹೊಂಡವೊಂದರಲ್ಲಿ ಎರಡು ಕಾಡುಕೋಣಗಳ ಮೃತದೇಹ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಕಾಡುಕೋಣ ಮೃತಪಟ್ಟು ನಾಲ್ಕೈದು ದಿನಗಳಾಗಿರಬಹುದು ಎನ್ನಲಾಗುತಿದ್ದು , ವಿಷಪ್ರಾಶನ ಮಾಡಿದ್ದರಿಂದ ಕಾಡುಕೋಣಗಳು ಮೃತಪಟ್ಟಿರಬಹುದು ಎನ್ನಲಾಗುತಿದ್ದು ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರವಾದ ಕಾರಣ ತಿಳಿದುಬರಲಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳ ಪ್ರಕಾರ ಕಾಡುಕೋಣಗಳು ಮೇವನ್ನು ಅರಸಿ ತೋಟಕ್ಕೆ ಬಂದು ನೀರು ಕುಡಿಯಲು 20 ಅಡಿ ಆಳವಿರುವ ಹೊಂಡದಲ್ಲಿ ನೀರಿಗಾಗಿ ಇಳಿದು ಮೇಲಕ್ಕೆ ಏಳಲು ಆಗದೇ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳುತಿದ್ದು ಮರಣೋತ್ತರ ಪರೀಕ್ಷೆಯ ನಂತರ ನೈಜ ಸತ್ಯ ಹೊರಬೀಳಲಿದೆ.
ಹುಂಚ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕಾಡುಕೋಣಗಳ ಮಾರಣ ಹೋಮ

2024 ರ ಜೂನ್ ತಿಂಗಳಿನಲ್ಲಿ ಹುಂಚ, ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ, ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.ಈ ಬಗ್ಗೆ ಮಾಹಿತಿ ತಿಳಿದ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಸ್ಥಳಕ್ಕೆ ತೆರಳಿ ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಕಾಡುಕೋಣದ ಕಳೇಬರಗಳು ದೊರಕಿದ ಹಿನ್ನಲೆಯಲ್ಲಿ ಕಾಡುಕೋಣಗಳ ಮಾರಣಹೋಮ ನಡೆದಿರುವುದು ಖಚಿತವಾದ ಬಗ್ಗೆ ಸ್ಥಳದಿಂದಲೇ ಆಗಿನ ಅರಣ್ಯ ಇಲಾಖೆಯ ಡಿಸಿಎಫ಼್ ಸಂತೋಷ್ ಕೆಂಚಪ್ಪಣ್ಣನವರ್ , RFO ರಾಘವೇಂದ್ರ ರವರಿಗೆ ಮಾಹಿತಿ ತಿಳಿಸಲಾಗಿತ್ತು.ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಸಂತೋಷ್ ಕೆಂಚಣ್ಣನವರ್ ಹಾಗೂ Rfo ರಾಘವೇಂದ್ರ ಸ್ಥಳ ಪರಿಶೀಲನೆ ನಡೆಸಿ ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದರು.

ಕಾಡುಕೋಣಗಳ ಮಾರಣಹೋಮ ಕುರಿತು ವರದಿ ಕೇಳಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಜೂನ್ 2024 ರಲ್ಲಿ ಹೊಸನಗರ ತಾಲೂಕಿನ ಹುಂಚ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದ ಕಾಡುಕೋಣಗಳ ಮಾರಣಹೋಮ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿಯನ್ನಾಧರಿಸಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಕರಣ ನಡೆದಿರುವ ಸ್ಥಳಗಳಲ್ಲಿ ಕಳ್ಳಬೇಟೆ ತಡೆ ಶಿಬಿರಗಳಿದ್ದರೂ ಇಂತಹ ಪ್ರಕರಣ ನಡೆಯುತ್ತಿರುವುದ ಆತಂಕದ ಸಂಗತಿಯಾಗಿದ್ದು ಈ ಕೂಡಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿಯನ್ನು ಸಲ್ಲಿಸುವಂತೆ ಹಾಗೂ ಸದರಿ ಸ್ಥಳಗಳಲ್ಲಿ ಗಸ್ತು ಹೆಚ್ಚಿಸುವಂತೆ ಸೂಚಿಸಿದ್ದರು.
ಒಟ್ಟಾರೆಯಾಗಿ ಈ ಭಾಗದಲ್ಲಿ ಪ್ರತ್ಯಕ್ಷಗೊಳ್ಳುತಿದ್ದ ಇಪ್ಪತ್ತಕ್ಕೂ ಹೆಚ್ಚಿನ ಕಾಡುಕೋಣಗಳ ಹಿಂಡು ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿಗೆ ಬಂದಿದೆ.ಇನ್ನಾದರೂ ಅರಣ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕಾಗಿದೆ.
