ಮಳೆಯಲ್ಲೂ ಯಶಸ್ವಿಯಾಗಿ ಸಾಗಿದ ತಿರಂಗ ಯಾತ್ರೆ
ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ 300 ಅಡಿ ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು. ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗಾವನ್ನು ಹಿಡಿದು ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಿಂದ ವಿನಾಯಕ ವೃತ್ತದ ಮೂಲಕ ಸಾಗಿ ಪ್ರಮುಖ ರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ನಡೆಸಿದರು.
ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿಗಂಗಾಧರ್ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರವಿದೆ. ಅವರಲ್ಲಿದ್ದ ದೇಶಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು. ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ. ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಯಾವ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಲಿದಾನಗಳನ್ನು ಸ್ಮರಿಸಿಕೊಳ್ಳುವುದಿಲ್ಲವೋ ಈ ದೇಶದ ಭವಿಷ್ಯ ಕರಾಳವಾಗಿರುತ್ತದೆ. ಆ ರೀತಿಯ ಉದಾಹರಣೆಯನ್ನು ನಾವು ವಿದೇಶಗಳಲ್ಲಿ ನೋಡಿದ್ದೇವೆ. ಇಂತಹ ಸಮಯದಲ್ಲಿ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡುವುದು ಪ್ರತಿಯೊಬ್ಬ ನಾಗಕರಿನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಳೆಯಲ್ಲಿಯೂ ಯಶಸ್ವಿಯಾದ ತಿರಂಗ ಯಾತ್ರೆ
ಗ್ರಾಮ ಪಂಚಾಯತ್ ನಿಂದ ಪ್ರಾರಂಭವಾದ ತಿರಂಗಾ ಯಾತ್ರೆಯಲ್ಲಿ ಸುಮಾರು 300 ಅಡಿ ಉದ್ದದ ಭಾರತದ ರಾಷ್ಟ್ರಧ್ವಜವನ್ನಿಟ್ಟುಕೊಂಡು ಸಾಗಲಾಯಿತು. ಯಾತ್ರೆ ಪ್ರಾರಂಭವಾಗುತ್ತಿದ್ದಂತಯೇ ವರುಣನ ಆಗಮನವಾಯಿತು. ಮಳೆ ಬಂದರೂ ಸಹ ಯಾತ್ರೆಯನ್ನು ನಿಲ್ಲಿಸದೇ ರಾಷ್ಟ್ರಧ್ವಜ ಹಿಡಿದುಕೊಂಡು ವಿದ್ಯಾರ್ಥಿಗಳು, ಪಟ್ಟಣದ ನಾಗರಿಕರು ಸಾಗಿದ್ದು ವಿಶೇಷವಾಗಿತ್ತು. ಮಳೆಯಲ್ಲೂ ಸಹ ಸುಮಾರು ನೂರಾರು ಜನರು ರಾಷ್ಟ್ರಧ್ವಜ ಹಿಡಿದರು. ಯಾತ್ರೆಯ ಮೂಲಕ ಪ್ರತಿಯೊಬ್ಬ ಜನರಲ್ಲೂ ದೇಶ ಭಕ್ತಿ ಜಾಗೃತಗೊಳಿಸುವ ಕೆಲಸ ಮಾಡಲಾಯಿತು. ಯಾತ್ರೆಯಲ್ಲಿ ಮಾಜಿ ಸೈನಿಕರು, ರಾಷ್ಟ್ರಭಕ್ತರು, ದೇಶಪ್ರೇಮಿಗಳು ಸೇರಿದಂತೆ ಹಲವರು ಭಾಗಿಯಾದ್ದರು.