72 ಗಂಟೆಗಳ ಶೋಧದ ಬಳಿಕ ಸಿಕ್ಕಿದ ಬೆಂಗಳೂರಿನ ಮಹಿಳೆಯ ಮೃತದೇಹ – ಮೂಕಾಂಬಿಕಾ ಭಕ್ತೆಯ ಅಂತಿಮ ಆಸೆ ನೆರವೇರಿಸಿ
ಮಾನವೀಯತೆ ಮೆರೆದ ಸ್ಥಳೀಯರು
ಕೊಲ್ಲೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಸೌಪರ್ಣಿಕಾ ನದಿಯಲ್ಲಿ ಪತ್ತೆ – ಮಹಿಳೆಯ ಕೊನೆಯಾಸೆಯಂತೆ ಕೊಲ್ಲೂರಿನಲ್ಲಿಯೇ ಅಂತ್ಯಕ್ರಿಯೆ – ಮಾನವೀಯತೆ ಮೆರೆದ ಸ್ಥಳೀಯರು
ಕೊಲ್ಲೂರು : ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬೆಂಗಳೂರಿನ ವಸುಧಾ ಚಕ್ರವರ್ತಿ (46) ಅವರ ಮೃತದೇಹ ಶನಿವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸರಹದ್ದಿನ ಸೌಪರ್ಣಿಕಾ ನದಿಯಲ್ಲಿ ಪತ್ತೆಯಾಗಿದೆ. ಅವರು ಮೂಕಾಂಬಿಕಾ ದೇವಿಯ ಪರಮಭಕ್ತೆಯಾಗಿದ್ದು, ತಮ್ಮ ಕೊನೆಯಾಸೆಯಂತೆ ಕೊಲ್ಲೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಘಟನೆ ವಿವರ
ಆಗಸ್ಟ್ 27ರಂದು ಕೊಲ್ಲೂರಿಗೆ ಬಂದಿದ್ದ ವಸುಧಾ ಅವರು ಸಮೀಪದ ವಸತಿಗೃಹದ ಬಳಿ ಕಾರು ನಿಲ್ಲಿಸಿ ಸೌಪರ್ಣಿಕಾ ನದಿಯ ತಟದಲ್ಲಿ ಕಾಣೆಯಾಗಿದ್ದರು. ಕುಟುಂಬಸ್ಥರು ಪೊಲೀಸರು ಹಾಗೂ ಮುಳುಗು ತಜ್ಞರೊಂದಿಗೆ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು.
ಮುಳುಗು ತಜ್ಞ ಈಶ್ವರ ಮಲ್ಪೆ, ಹರೀಶ್ ಪೂಜಾರಿ ಹಾಗೂ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ 72 ಗಂಟೆಗಳ ಶೋಧದ ಬಳಿಕ ಶನಿವಾರ ನದಿಯ ಮದ್ಯೆ ಮರದ ಕೊಂಬೆಗೆ ಸಿಲುಕಿದ್ದ ಮೃತದೇಹ ಪತ್ತೆ ಹಚ್ಚಿದರು. ಮಳೆಯ ನಡುವೆ ಮೂರು ಕಿಲೋಮೀಟರ್ ಕಾಡುಹಾದಿ ದಾಟಿ ಮೃತದೇಹವನ್ನು ಹೊತ್ತುಕೊಂಡು ಬರಬೇಕಾಯಿತು.
ಶೋಧ ಕಾರ್ಯದಲ್ಲಿ ಪಾಲ್ಗೊಂಡವರು
ಈ ಕಾರ್ಯಾಚರಣೆಯಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕೊಲ್ಲೂರು ಠಾಣೆ ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ನಾಗೇಂದ್ರ, ಲಕ್ಷ್ಮಣ್ ಗಾಣಿಗ, ಅಣ್ಣಪ್ಪ ನಾಯ್ಕ, ಸುರೇಶ್, ಗಂಗೊಳ್ಳಿ ಆಪತ್ಪಾಂಧವ ಇಬ್ರಾಹಿಂ, ಸ್ಥಳೀಯರು ಪ್ರದೀಪ್ ಭಟ್ ಸಂಪ್ರೆ, ನಾಗರಾಜ್ ನಾಯ್ಕ ಬಾವಡಿ, ಉಮೇಶ್ ಭಟ್ ಗೊಳಿಗುಡ್ಡೆ ಮುಂತಾದವರು ಮಾನವೀಯ ಸೇವೆ ಸಲ್ಲಿಸಿದರು.
ಅಂತಿಮ ವಿಧಿ-ವಿಧಾನ
ಕುಂದಾಪುರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕೊಲ್ಲೂರಿಗೆ ತಂದು, ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಭಟ್, ಪ್ರಕಾಶ್ ಗೆದ್ದೆಮನೆ ಹಾಗೂ ಅನೇಕ ಸ್ಥಳೀಯರು ಸಹಕರಿಸಿದರು.
“ಎಲ್ಲೊ ಹುಟ್ಟಿ, ಎಲ್ಲೊ ಬದುಕಿ, ಇನ್ನೆಲ್ಲೊ ಉಸಿರು ಚೆಲ್ಲಿ, ಮತ್ತೆಲ್ಲೊ ಪಂಚಭೂತಗಳಲ್ಲಿ ಲೀನವಾಗುವುದು; ಇದು ವಿಧಿಯ ಆಟವಷ್ಟೆ.”