Headlines

RIPPONPETE | ಗಣಪತಿ ಹಬ್ಬದ ಸಂಪ್ರದಾಯವಿಲ್ಲದ ಊರಿನಲ್ಲಿ ‘ವಿಘ್ನ ನಿವಾರಕ’ ವಿಸ್ಮಯಕಾರಿ ಪ್ರತ್ಯಕ್ಷ

ಗಣಪತಿ ಹಬ್ಬದ ಸಂಪ್ರದಾಯವಿಲ್ಲದ ಊರಿನಲ್ಲಿ ‘ವಿಘ್ನ ನಿವಾರಕ’ ವಿಸ್ಮಯಕಾರಿ ಪ್ರತ್ಯಕ್ಷ

“ನನ್ನನ್ನೂ ಮರೆತಿರಾ?” – ಮೋರಿ ಕಟ್ಟೆಯ ಮೇಲೆ ದಿಡೀರ್ ಪ್ರತ್ಯಕ್ಷನಾದ ವಿಘ್ನ ನಿವಾರಕ – ಊರಿನ ಸಂಪ್ರದಾಯಕ್ಕೆ ಹೊಸ ತಿರುವು

ಶಿವಮೊಗ್ಗ ಜಿಲ್ಲೆಯ ಒಂದು ಗ್ರಾಮದಲ್ಲಿ ಈ ಬಾರಿಯ ಗಣೇಶೋತ್ಸವ ಹಬ್ಬದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಇಲ್ಲಿಯವರೆಗೆ ಗಣಪತಿ ಹಬ್ಬವನ್ನು ಆಚರಿಸುವ ಸಂಪ್ರದಾಯವೇ ಇಲ್ಲದ ಗ್ರಾಮಕ್ಕೆ, ಯಾರೋ ಅಗಂತುಕರು ಹೊಸ ಗಣಪತಿ ವಿಗ್ರಹವನ್ನು ತಂದಿಟ್ಟು ಹೋಗಿರುವುದು ಗ್ರಾಮಸ್ಥರು ಬೆಚ್ಚಿಬೀಳುವಂತ ಘಟನೆ ನಡೆದಿದೆ.

ಹೌದು ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಗಾಜಿನಗೋಡು ಗ್ರಾಮದಲ್ಲಿ ಚೌತಿ ಸಂಧರ್ಭದಲ್ಲಿ ಗೌರಿಯನ್ನು ಮನೆಮನೆಗೆ ಕೂರಿಸಿ ವಿಶೇಷ ಪೂಜೆ ಸಲ್ಲಿಸಿ, ನಂತರ ವಿಸರ್ಜಿಸುವುದೇ ಶ್ರದ್ಧಾ ಭಕ್ತಿ ಸಂಪ್ರದಾಯ.ಗಣಪತಿ ಪ್ರತಿಷ್ಠಾಪನೆಗಾಗಿ ಗ್ರಾಮದಲ್ಲಿ ಹಣ ಒಟ್ಟು ಮಾಡಿ ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಗಣಪತಿಗೆ ನೀಡುವುದು ಸಂಪ್ರದಾಯವಾಗಿತ್ತು. ಈ ವರ್ಷವೂ ಅದೇ ರೀತಿಯಲ್ಲಿ ಮದ್ಯ ರಾತ್ರಿ ಗೌರಿ ವಿಸರ್ಜನೆ ಮುಗಿಸಿ ಗ್ರಾಮಸ್ಥರು ಹಿಂದಿರುಗುತ್ತಿದ್ದಾಗ, ಊರಿನ ಮೋರಿ ಕಟ್ಟೆಯ ಮೇಲೆ ಸುಸಜ್ಜಿತವಾಗಿ ಪ್ಯಾಕಿಂಗ್ ಆಗಿ ಕೇಸರಿ ಬಟ್ಟೆಯಿಂದ ಮುಚ್ಚಲ್ಪಟ್ಟಿದ್ದ ಹೊಸ ಗಣಪತಿ ವಿಗ್ರಹವನ್ನು ಯಾರೋ ಇಟ್ಟಿರುವುದು ಕಣ್ಣಿಗೆ ಬಿದ್ದಿತು.

ಈ ಘಟನೆ ಗ್ರಾಮದಲ್ಲಿ ತಕ್ಷಣವೇ ಕುತೂಹಲ-ಆಶ್ಚರ್ಯ ಮೂಡಿಸಿತು. ಕೂಡಲೇ ಹಿರಿಯರು ಹಾಗೂ ಗ್ರಾಮಸ್ಥರು ಸೇರಿ ಸಭೆ ನಡೆಸಿ ಊರಿಗೆ ದಿಡೀರ್ ಪ್ರತ್ಯಕ್ಷವಾಗಿರುವ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲು ನಿರ್ಧಾರ ಕೈಗೊಂಡರು. ನಂತರ ಆ ದಿಡೀರ್ ಪ್ರತ್ಯಕ್ಷನಾದ ವಿಘ್ನ ನಿವಾರಕನನ್ನು ಗೌರವದಿಂದ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ನೆರವೇರಿಸಿದರು.

“ಈ ಗ್ರಾಮದಲ್ಲಿ ಗಣಪತಿ ಹಬ್ಬ ಎಂದಿಗೂ ಆಚರಣೆ ಆಗಿಲ್ಲ. ಆದರೆ ಈ ಬಾರಿ ಅನಿರೀಕ್ಷಿತವಾಗಿ ಗಣೇಶನ ಆಗಮನ ನಮಗೆ ಆಶ್ಚರ್ಯ ತಂದರೂ, ಸಂತೋಷವನ್ನೂ ನೀಡಿತು” ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆಯಾಗಿ ಈ ಘಟನೆ ಗಾಜಿನಗೋಡು ಗ್ರಾಮದ ಸಂಪ್ರದಾಯಕ್ಕೆ ಹೊಸ ತಿರುವನ್ನು ತಂದುಕೊಟ್ಟಿದ್ದು , ವಿಘ್ನ ನಿವಾರಕನೇ ಗ್ರಾಮಕ್ಕೆ ಬಂದು ಪೂಜೆ ಸ್ವೀಕರಿಸಿದ್ದಾನೆ ಎನ್ನಬಹುದು ಅಥವಾ ಈ ಊರಿನಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಗ್ರಾಮಸ್ಥರಲ್ಲಿ ಯಾರಾದರೂ ಗಣಪತಿಯನ್ನು ತಂದಿರಿಸಿರಬಹು ಎನ್ನಲಾಗುತಿದೆ.

– ರಫ಼ಿ ರಿಪ್ಪನ್ ಪೇಟೆ