POSTMAN NEWS

ನೈಜ ಸುದ್ದಿ ನೇರ ಬಿತ್ತರ..

ದೆವ್ವ ಬಿಡಿಸುವುದಾಗಿ ಥಳಿಸಿ ಮಹಿಳೆಯ ಹತ್ಯೆ ಪ್ರಕರಣ: ಮೂವರ ಬಂಧನ

N671738386175224448386585e0abd99714b0a9639e7211187a5c3b614d79c74b913957ba3bf2d6fabc1809

ದೆವ್ವ ಬಿಡಿಸುವುದಾಗಿ ಥಳಿಸಿ ಮಹಿಳೆಯ ಹತ್ಯೆ ಪ್ರಕರಣ: ಮೂವರ ಬಂಧನ

ದೆವ್ವ ಬಿಡಿಸುವ ನೆಪದಲ್ಲಿ ಹಲ್ಲೆ ನಡೆಸಿದ ಅದೇ ಗ್ರಾಮದ ಆಶಾ (35), ಆಕೆಯ ಪತಿ ಸಂತೋಷಕುಮಾರ್ (37) ಹಾಗೂ ಗೀತಮ್ಮ ಅವರ ಪುತ್ರ ಸಂಜಯ್ (20) ಅವರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ರವಿವಾರ ರಾತ್ರಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ಅಮಾನುಷವಾಗಿ ಥಳಿಸಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಮಹಿಳೆ ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ಜಂಬರಗಟ್ಟೆ ಗ್ರಾಮದ ಗೀತಮ್ಮ (45) ಮೃತ ಮಹಿಳೆ.

ದೆವ್ವ ಬಿಡಿಸುವ ನೆಪದಲ್ಲಿ ಹಲ್ಲೆ ನಡೆಸಿದ ಅದೇ ಗ್ರಾಮದ ಆಶಾ (35), ಆಕೆಯ ಪತಿ ಸಂತೋಷಕುಮಾರ್ (37) ಹಾಗೂ ಗೀತಮ್ಮ ಅವರ ಪುತ್ರ ಸಂಜಯ್ (20) ಅವರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಂಬರಗಟ್ಟೆಯ ನಿವಾಸಿ ಆಶಾ ತಮ್ಮ ಮೇಲೆ ಗ್ರಾಮದೇವತೆ ಚೌಡೇಶ್ವರಿ ಬಂದಿದ್ದಾಳೆ ಎಂದು ಕಳೆದ 15 ದಿನಗಳಿಂದ ಊರಿನವರನ್ನು ನಂಬಿಸಿದ್ದರು. ಹೀಗಾಗಿ ತನ್ನ ತಾಯಿಯ ಮೈಮೇಲೆ ಆಗಾಗ ದೆವ್ವ ಬರುತ್ತದೆ ಎಂದು ಗೀತಮ್ಮ ಅವರನ್ನು ಪುತ್ರ ಸಂಜಯ್ ರಾತ್ರಿ 9:15ರ ವೇಳೆಗೆ ಆಶಾ ಮನೆಗೆ ಕರೆದೊಯ್ದಿದ್ದರು.

‘ಗೀತಮ್ಮನ ಮೈಯಲ್ಲಿ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಅದನ್ನು ಹೊರ ಹಾಕುತ್ತೇನೆ ಎಂದು ಆಶಾ ತಿಳಿಸಿದ್ದರು. ಹೀಗಾಗಿ ಅವರ ಮನೆಗೆ ಕರೆದೊಯ್ದಿದ್ದೆವು. ಮೊದಲಿಗೆ ದೇವರ ಪೂಜೆ ಮಾಡಿದ್ದರು. ನಂತರ ದೆವ್ವ ಓಡಿಸುವೆ ಎಂದು ತಲೆ ಮೇಲೆ ಕಲ್ಲು ಹೊರಿಸಿ ಗ್ರಾಮದ ಹೊರಗಿನ ಮರವೊಂದರ ಬಳಿಗೆ ಕರೆದೊಯ್ದರು. ಮರದ ಟೊಂಗೆಯೊಂದನ್ನು ಕಿತ್ತುಕೊಂಡು ಅಲ್ಲಿ ಮನಬಂದಂತೆ ಥಳಿಸಿದರು. ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಹೊರಿಸಿ ಪಕ್ಕದ ಕಾಲುವೆಯಲ್ಲಿದ್ದ ತಣ್ಣೀರು ಎರಚಿದರು. ಚಳಿ ತಾಳಲಾಗದೇ ನಡುಗುತ್ತಿದ್ದ ಅಮ್ಮ ಕುಸಿದು ಬಿದ್ದರು ಎಂದು ಸಂಜಯ್ ಹೊಳೆಹೊನ್ನೂರು ಠಾಣೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.

ಗೀತಮ್ಮನ ಮೈಯಲ್ಲಿದ್ದ ಆತ್ಮ ಹೊರಹೋಗಿದೆ. ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದ ಆಶಾ ಅವರನ್ನು ಮನೆಗೆ ಕಳಿಸಿದ್ದಾರೆ. ಈ ವೇಳೆ ತೀವ್ರ ಅಸ್ವಸ್ಥವಾಗಿದ್ದ ಗೀತಮ್ಮರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೆವ್ವ ಬಿಡಿಸುವ ನೆಪದಲ್ಲಿ ಕೋಲಿಂದ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ಮುಚ್ಚಿ ಹಾಕಲು ಯತ್ನ:

ದೆವ್ವ ಬಿಡಿಸುವ ನೆಪದಲ್ಲಿ ನಡೆದ ಹಲ್ಲೆಯಿಂದ ಗೀತಮ್ಮ ಬೆಳಗಿನ ಜಾವವೇ ಸಾವಿಗೀಡಾಗಿದ್ದಾರೆ. ಈ ವಿಚಾರ ಹರಡುತ್ತಿದ್ದಂತೆಯೇ ಊರಿನ ಕೆಲವರು ಪಂಚಾಯತಿ ನಡೆಸಿದ್ದು ‘ಪೊಲೀಸರಿಗೆ ದೂರು ಕೊಡುವುದು ಬೇಡ. ಬದಲಿಗೆ ಗೀತಮ್ಮ ಅವರ ಕುಟುಂಬಕ್ಕೆ ಆರೋಪಿ ಆಶಾಳಿಂದ 50,000 ರೂ. ಪರಿಹಾರ ಕೊಡಿಸುವ ತೀರ್ಮಾನ ತೆಗೆದುಕೊಂಡಿದ್ದರು. ಹೀಗಾಗಿ ಸೋಮವಾರ ಸಂಜೆಯವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಆ ನಿರ್ಣಯಕ್ಕೆ ಒಪ್ಪದೇ ಗೀತಮ್ಮ ಮನೆಯವರು ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಶಾ ಮಾತ್ರವಲ್ಲದೆ ಜಂಬರಗಟ್ಟೆ ಗ್ರಾಮದಲ್ಲಿ ಗ್ರಾಮದೇವತೆ ಚೌಡಮ್ಮ ಆಗಾಗ ತಮ್ಮ ಮೈಮೇಲೆ ಬರುವುದಾಗಿ ಇನ್ನೂ ಮೂವರು ನಂಬಿಸಿದ್ದಾರೆ ಎಂದು ತಿಳಿದುಬಂದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.