Headlines

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯದ ಅಭಿವೃದ್ಧಿಗೆ ಅಡ್ಡಿ : ಶಾಸಕರ ವಿರುದ್ಧ ಹರತಾಳು ಹಾಲಪ್ಪ ಆರೋಪ

ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯದ ಅಭಿವೃದ್ಧಿಗೆ ಅಡ್ಡಿ : ಶಾಸಕರ ವಿರುದ್ಧ ಹರತಾಳು ಹಾಲಪ್ಪ ಆರೋಪ

ಹೊಸನಗರ, ಜುಲೈ 25: ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಾಲಯದ ಅಭಿವೃದ್ಧಿಗೆ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅಡ್ಡಗಾಲು ಹಾಕಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದ್ದಾರೆ.

ಕೋಡೂರು ಸಮೀಪದ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರದ ಅವಧಿಯಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡಲಾಗಿತ್ತು. ಆದರೆ ಬದಲಾಗಿದ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಅಡಚಣೆಯಿಂದ ಆ ಹಣ ಬಳಕೆಯಾಗದೆ ಮರಳಿ ಸರ್ಕಾರಕ್ಕೆ ಹಿಂತಿರುಗಿದೆ” ಎಂದರು.

“ರಾಜ್ಯ ನೀರಾವರಿ ನಿಗಮದ ಮೂಲಕ ಬಿಡುಗಡೆಯಾದ ಈ ಹಣವನ್ನು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡಲಾಗಿತ್ತು. ಆದರೆ ಸರ್ಕಾರ ಬದಲಾಗಿದ ನಂತರ ಸ್ಥಳೀಯ ಶಾಸಕರ ತೊಂದರೆಯಿಂದ ಈ ಹಣವನ್ನು ಬಳಕೆಯಾಗಿ ಸಾಧ್ಯವಾಗದೆ ಕೊನೆಗೆ ಸರ್ಕಾರದ ಹಿಂಪಡೆಯುವ ಸ್ಥಿತಿ ಉಂಟಾಯಿತು” ಎಂದು ದಾಖಲೆ ಸಹಿತ ವಿವರಿಸಿದರು.

ದೇವಸ್ಥಾನವನ್ನು ಪ್ರವಾಸಿ ಕ್ಷೇತ್ರವನ್ನಾಗಿಸುವ ಕನಸು
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಜೇನುಕಲ್ಲಮ್ಮ ಕ್ಷೇತ್ರವನ್ನು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡುವ ಸಂಕಲ್ಪ ನಮ್ಮದು” ಎಂದು ಅವರು ಹೇಳಿದರು.

ದೇವಸ್ಥಾನದ ಶಿಲಾಮಯ ರೂಪದಲ್ಲಿ ನಿರ್ಮಾಣ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಲೋಕಾರ್ಪಣೆಗೊಂಡಿದೆ. ಭಕ್ತರು ಈ ನೂತನ ದೇವಾಲಯದಲ್ಲಿ ದರ್ಶನ ಪಡೆಯುತ್ತಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಶ್ರಮ ಹಾಗೂ ಭಕ್ತರ ದೇಣಿಗೆಗಳಿಂದ ಈ ಕೆಲಸ ಸಾಧ್ಯವಾಗಿದೆ ಎಂದು ಅವರು ಪ್ರಶಂಸಿಸಿದರು.

ದೇವಸ್ಥಾನಕ್ಕೆ ಸುತ್ತಲೂ 26 ಎಕರೆ ಜಮೀನಿದೆ. ಆದರೆ ಈ ಜಮೀನು ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಗಡಿ ಗುರುತಿಸುವುದು ಸಂಕಷ್ಟವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಇದೀಗ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುತ್ತಿರುವ ಸಂದರ್ಭದಲ್ಲಿ ರಾಜಕೀಯ ಅಡಚಣೆಗಳಿಂದ ಮುಕ್ತವಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹರತಾಳು ಹಾಲಪ್ಪ ಕರೆ ನೀಡಿದರು.

ಈ ಸಂಧರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿಕೇಂದ್ರ ಅಧ್ಯಕ್ಷ ಎನ್.ಸತೀಶ್,ಮೆಣಸೆ ಆನಂದ್ , ಆರ್.ಟಿ.ಗೋಪಾಲ, ಮನೋಧರ, ಅಬ್ಬಿ ಕಿರಣ್‌ಕುಮಾರ್, ಹಾಲಗದ್ದೆ ಉಮೇಶ್, ನಗರ ನಿತಿನ್, ಸುಧೀರ್‌ಭಟ್ ಕೋಡೂರು, ವಿಜೇಂದ್ರರಾವ್ ಕೋಡೂರು, ಜ್ಯೋತಿ, ಸುಮಾ, ಅಭಿಲಾಶ್, ಮಂಡಾನಿ ಮೋಹನ್, ಕೆ.ಬಿ.ಹೂವಪ್ಪ, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.