Headlines

ಕೆಎಸ್‌ಆರ್‌ಟಿಸಿ ಬಸ್ಸು–ಲಾರಿ ಮುಖಾಮುಖಿ ಡಿಕ್ಕಿ: ಹಲವರಿಗೆ ಗಂಭೀರ ಗಾಯ , ಶಾಲಾ ಬಸ್ಸಿನಲ್ಲಿ ಗಾಯಾಳುಗಳ ರಕ್ಷಣೆ

ಕೆಎಸ್‌ಆರ್‌ಟಿಸಿ ಬಸ್ಸು–ಲಾರಿ ಮುಖಾಮುಖಿ ಡಿಕ್ಕಿ: ಹಲವರಿಗೆ ಗಂಭೀರ ಗಾಯ , ಶಾಲಾ ಬಸ್ಸಿನಲ್ಲಿ ಗಾಯಾಳುಗಳ ರಕ್ಷಣೆ

ಶಿವಮೊಗ್ಗ, ಜುಲೈ 24: ಸಾಗರ ತಾಲೂಕು ಆನಂದಪುರ ಸಮೀಪದ ಮುಂಬಾಳು ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಕಚೇರಿಗೆ ತೆರಳುತ್ತಿದ್ದವರು ಸೇರಿದ್ದಾರೆ.

ಘಟನೆ ವಿವರ:

ಸಾಗರದಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಆನಂದಪುರದಿಂದ ಸಾಗರದತ್ತ ಬರುತ್ತಿದ್ದ ಲಾರಿ ನಡುವೆ 08:30ರ ಹೊತ್ತಿಗೆ ಡಿಕ್ಕಿ ಸಂಭವಿಸಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್ಸಿನಲ್ಲಿ ವಿದ್ಯಾರ್ಥಿಗಳು, ನೌಕರರು ಸೇರಿದಂತೆ ಅನೇಕ ಪ್ರಯಾಣಿಕರು ಇದ್ದರು. ಬಸ್ ಮುಂದಿನ ಭಾಗ ಗಂಭೀರವಾಗಿ ಹಾನಿಗೊಳಗಾಗಿದೆ.

ಸ್ಥಳೀಯರ ಮಾನವೀಯ ನಡೆ:

ಘಟನೆಯ ಬೆನ್ನಲ್ಲೇ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದು, ಮರ್ಕಜ್ ಶಾಲೆಯ ವಿದ್ಯಾರ್ಥಿಗಳ ಬಸ್ಸುವನ್ನೇ ತಾತ್ಕಾಲಿಕ ಅಂಬ್ಯುಲೆನ್ಸಾಗಿ ಉಪಯೋಗಿಸಿ ಗಾಯಾಳುಗಳನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ವಾಹನ ಸಂಚಾರ ಸ್ಥಗಿತ:

ಅಪಘಾತದಿಂದಾಗಿ ಮುಂಬಾಳು ಕ್ರಾಸ್ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಹೆದ್ದಾರಿಯಲ್ಲಿ ದೀರ್ಘ ವಾಹನಗಳ ಸಾಲು ಕಂಡುಬಂದಿತು.

ಪೊಲೀಸರ ಕಾರ್ಯಾಚರಣೆ:

ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಆನಂದಪುರ ಠಾಣೆಯ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಹಾದಿ ಮುಕ್ತಗೊಳಿಸಲು ಮುಂದಾಗಿದ್ದಾರೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆಯುತ್ತಿರುವವರ ಪಟ್ಟಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.