Headlines

ಪತ್ರಕರ್ತರಿಗೆ ಪ್ರಾಮಾಣಿಕತೆ ಮುಖ್ಯ : ದಿನೇಶ್ ಅಮೀನ್‌ ಮಟ್ಟು

ಪತ್ರಕರ್ತರಿಗೆ ಪ್ರಾಮಾಣಿಕತೆ ಮುಖ್ಯ : ದಿನೇಶ್ ಅಮೀನ್‌ ಮಟ್ಟು

ಶಿವಮೊಗ್ಗ : ಮುದ್ರಣ ಮಾಧ್ಯಮ ವಿಶ್ವಾರ್ಸಹತೆ ಉಳಿಸಿಕೊಂಡಿದೆ. ಮಾಧ್ಯಮದ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಮಾಧ್ಯಮದ ಬಗ್ಗೆ ಮಾತನಾಡುವ ಸಂದಿಗ್ಧ ಪರಿಸ್ಥಿತಿ ಇದೆ. ವಾಟ್ಸಾಪ್ ಯೂನಿವರ್ಸಿಟಿಗಳಿಂದ ಅನೇಕರಿಗೆ ಧ್ವನಿ ಬಂದಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯ, ಪ್ರತಿಭಾ ಪುರಸ್ಕಾರ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಪತ್ರಕರ್ತರಿಗೆ ಪೋಲೀಸರಿಗೆ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಹಬ್ಬ ಹರಿದಿನಗಳಲ್ಲಿಯೂ ದೂರವಿರಬೇಕಾಗುತ್ತದೆ. ಪತ್ರಕರ್ತರು ಎಲ್ಲರ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಾರೆ. ಆದರೆ ಅವರ ಕಾರ್ಯಕ್ರಮಕ್ಕೆ ಯಾರೂ ಬರುವುದಿಲ್ಲ. ಪ್ರಸ್ತುತ ದೇಶದಲ್ಲಿ ಈಗ ಸುಮಾರು 80 ಸಾವಿರ ಪತ್ರಿಕೆಗಳು, 800ಕ್ಕೂ ಅಧಿಕ ಟಿವಿ ಚಾನಲ್‌ಗಳು ಇವೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿದೆ. ರಾಜಕಾರಣಿಗಳು, ಉದ್ಯಮಿಗಳು, ಧರ್ಮಗುರುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮತದಾರರು , ಕಾರ್ಮಿಕರು, ರೈತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಧ್ವನಿ ಎತ್ತಿದವರನ್ನು ದಮನ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳು, ಆದರೆ ರಾಜಕಾರಣಿಗಳನ್ನು ಬೈದು ದಕ್ಕಿಸಿಕೊಳ್ಳಬಹುದು. ಧರ್ಮಗುರುಗಳನ್ನು ಬೈದರೆ ನೋಟೀಸ್ ಕೊಡುತ್ತಾರೆ. ಇದುವರೆಗೂ ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡರು ನೋಟೀಸ್ ನೀಡಿದ ಉದಾಹರಣೆಗಳು ಇಲ್ಲ. ಆದರೆ ಧರ್ಮಗುರುಗಳ ಬಗ್ಗೆ ಮಾತನಾಡಿದರೆ, ತಲೆ ಹೋಗುತ್ತದೆ ಎಂದರು.

ಮಾಧ್ಯಮ ಉದ್ಯಮವಾದರೆ ತೊಂದರೆ ನಿಜ. ಸಮಾಜ ಸೇವೆಗಾಗಿ ಯಾರೂ ಪತ್ರಿಕೆ ಚಾನಲ್ ಮಾಡುವುದಿಲ್ಲ. ಉದ್ಯಮ ಲಾಭಗಳಿಕೆಯ ಉದ್ದೇಶವಾಗಿರುತ್ತದೆ. ಕರ್ನಾಟಕದ ಬಜೆಟ್ 4 ಲಕ್ಷ ಕೋಟಿ ರೂ. ಆದರೆ, ಅಂಬಾನಿ 8 ಲಕ್ಷ ಕೋಟಿ ರೂ. ಅದಾನಿ 14 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ. 4 – 5 ಅಂಬಾಬಿ ಅದಾನಿ ಸೇರಿದರೆ ದೇಶದ ಸಂಪತ್ತಿನಷ್ಟಾಗುತ್ತದೆ. ಅವರು ಕೂಡ ಮಾಧ್ಯಮ ಕ್ಷೇತ್ರವನ್ನು ವ್ಯಾಪಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಲಾಭ ಗಳಿಕೆಗಿಂತ ಸಾಮ್ರಾಜ್ಯದ ರಕ್ಷಣೆ ಮುಖ್ಯವಾಗಿರುತ್ತದೆ. ಬೇಕಾದರೆ ಪತ್ರಿಕೆಗಳನ್ನು ಉಚಿತವಾಗಿ ಕೊಟ್ಟು ಬಿಡುತ್ತಾರೆ ಎಂದರು.

ಉದ್ಯಮಿಗಳು ಮತ್ತು ಧರ್ಮಗುರುಗಳಿಗೆ ಮಾಧ್ಯಮ ಆಯುಧವಾಗಿದೆ. ಯಾವುದೇ ಧರ್ಮ ಗುರುಗಳ ವಿರುದ್ಧ ಬರೆದು ದಕ್ಕಿಸಿಕೊಳ್ಳುವುದು ಕಷ್ಟ. ದೇವರ ನಡುವೆ ಏಜೆಂಟರ್ ಬೇಕಾಗಿಲ್ಲ. ಜನ ಈಗಲೂ ದಿನಪತ್ರಿಕೆಗಳನ್ನು ನಂಬುತ್ತಾರೆ. ಪತ್ರಿಕೆಗಳ ವಿಶ್ವಾಸರ್ಹತೆಯನ್ನು ಕೊಂದರೆ ಜನ ನಂಬುವುದಿಲ್ಲ ಪತ್ರಿಕೆಗಳು ರದ್ದಿಯಾಗುತ್ತವೆ. ಅದಕ್ಕಾಗಿ ಪತ್ರಿಕೆಗಳ ವಿಶ್ವಾಸರ್ಹತೆ ಕಳೆಯುತ್ತಿದ್ದಾರೆ ಎಂದರು.

ಪ್ರಾಮಾಣಿಕತೆ ಪತ್ರಕರ್ತರಿಗೆ ಮುಖ್ಯ. ಭ್ರಷ್ಟಚಾರ ಹೊಂದಾಣಿಕೆ ಇಲ್ಲದ ಕ್ಷೇತ್ರಗಳು ಈಗ ಇಲ್ಲವಾಗಿವೆ. ಉದ್ಯಮಿಗಳು, ಧರ್ಮಗುರುಗಳ ಬಗ್ಗೆ ಬರೆಯುವುದಿಲ್ಲ. ಸಾಮಾನ್ಯ ಓದುಗರಿಗೆ ಇದು ಅರ್ಥವಾಗುವುದಿಲ್ಲ. ಓದುಗರಿಗೂ ಜವಾಬ್ದಾರಿ ಇರುತ್ತದೆ. ರೈತರು ತಾವು ಬೆಳೆದ ಉತ್ಪನಗಳಿಗೆ ಬೆಳೆ ನಿರ್ಧಾರ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಉತ್ಪನಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವುದು ರೈತರ ಬೆಳೆ ಮತ್ತು ಪತ್ರಿಕೆಗಳು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಡಪ್ಪ, ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಖಜಂಚಿ ರಂಜಿತ್, ಉಪಸ್ಥಿತರಿದ್ದರು. ವೈದ್ಯ ಸ್ವಾಗತಿಸಿದರು, ದೀಪಕ್‌ಸಾಗರ್ ನಿರೂಪಿಸಿದರು, ಹುಮಾಯೂನ್ ಹರ್ಲಾಪುರ್ ಸಂಗಡಿಗರಿಗೆ ವಚನ ಗಾಯನ ಕಾರ್ಯಕ್ರಮ ನಡೆಯಿತು.