ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಶಿವಮೊಗ್ಗ, ಜುಲೈ 17, 2025: ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಸಂಬಂಧ ಕೆಲಸ ಮಾಡಿಕೊಡುವಂತೆ ಕೇಳಿ ₹3,000 ಲಂಚದ ಬೇಡಿಕೆ ಇಟ್ಟಿದ್ದ ಕಾರ್ಯದರ್ಶಿ ಕುಮಾರ್ ನಾಯ್ಕ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಮಪುರ ಗ್ರಾಮದ ನಿವಾಸಿ ವಿನೋದ್ ಬಿ. ಅವರು ಲಂಚದ ಬೇಡಿಕೆ ಬಗ್ಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ತಮ್ಮ ತಾಯಿ ಹೆಸರಿನಲ್ಲಿರುವ 30×50 ಅಡಿ ಅಳತೆಯ ಸೈಟಿನಲ್ಲಿ ನಿರ್ಮಿಸಿರುವ 23×38 ಅಡಿ ಮನೆಯ ಇ-ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ್ದಾಗ, ಸಂಬಂಧಪಟ್ಟ ಅಧಿಕಾರಿಯಾಗಿದ್ದ ಕುಮಾರ್ ನಾಯ್ಕ್ ₹3,000 ಲಂಚ ಕೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಲಂಚದ ಬೇಡಿಕೆಗೆ ಸಂಬಂಧಿಸಿದ ವಾಯ್ಸ್ ರೆಕಾರ್ಡ್ ಸಹಿತ ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು, ಭ್ರಷ್ಟಾಚಾರ ತಡೆ ಕಾಯ್ದೆ 1988 (ತಿದ್ದುಪಡಿ-2018) ನಡವಳಿಕೆಗಳಂತೆ ಸೆಕ್ಷನ್ 7(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್ ಇಟ್ಟು ಕಾರ್ಯಾಚರಣೆ ನಡೆಸಿದರು.
ಗುರುವಾರ, ಮುದ್ದಿನಕೊಪ್ಪ ಪಂಚಾಯಿತಿ ಕಚೇರಿಯೊಳಗೆ ನಗದು ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಈ ಕಾರ್ಯಾಚರಣೆಗೆ ಶಿವಮೊಗ್ಗ ಲೋಕಾಯುಕ್ತ ಠಾಣೆಯ ಪಿಎಐ ಗುರುರಾಜ್ ಎನ್. ಮೈಲಾರ ಅವರ ನೇತೃತ್ವವಿತ್ತು. ಪೊಲೀಸರಾದ ರುದ್ರೇಶ್ ಕೆ.ಪಿ., ಯೋಗೇಶ್ ಟೀಕಪ್ಪ, ಸುರೇಂದ್ರ ಮಂಜುನಾಥ್, ಬಿ.ಟಿ. ಚನ್ನೇಶ್, ದೇವರಾಜ್ ಸಿ.ಪಿ.ಸಿ., ಪ್ರಕಾಶ್ , ಅರುಣ್ ಕುಮಾರ್, ಅಂಜಲಿ, ಚಂದ್ರಿಬಾಯಿ, ಗೋಪಿ, ಪ್ರದೀಪ್ ಮತ್ತು ಜಯಂತ್ ಅವರು ಭಾಗವಹಿಸಿದ್ದರು.
ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.