Headlines

ರಿಪ್ಪನ್ ಪೇಟೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ!

ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿದೆ ಗಾಂಜಾ ಅಮಲು – ಯುವಕರ ಭವಿಷ್ಯ ತೀವ್ರ ಆತಂಕದಲ್ಲಿ!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ , ಕೋಡೂರು ,ಬಟ್ಟೆಮಲ್ಲಪ್ಪ , ಮಾರುತಿಪುರ , ಗರ್ತಿಕೆರೆ ,ಹುಂಚ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಪೋಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸಮಾಜಕ್ಕೆ ತೀವ್ರ ಆತಂಕ ತಂದಿಟ್ಟಿದೆ. ವಿದ್ಯಾಭ್ಯಾಸ ಹಾಗೂ ಬದುಕಿನ ಆಶಯಗಳನ್ನು ತಿರಸ್ಕರಿಸುತ್ತಾ, ಹಲವಾರು ಯುವಕರು ಗಾಂಜಾ ಸೇವನೆಯೊಂದಿಗೆ ತಮ್ಮ ಬದುಕಿಗೆ ತಾವೇ ಕೊಳ್ಳಿಯಿಟ್ಟುಕೊಳ್ಳುತಿದ್ದಾರೆ.

ರಿಪ್ಪನ್ ಪೇಟೆ ಪಟ್ಟಣದ ಲೇಔಟ್ , ಖಾಲಿ ಕಟ್ಟಡಗಳು ಮತ್ತು ಕಾಡು ಪ್ರದೇಶಗಳು ಗಾಂಜಾ ಸೇವಕರಿಗೆ ‘ಸೆಫ್ ಝೋನ್’ ಆಗಿ ಪರಿಣಮಿಸುತ್ತಿವೆ. ಕೆಲವರು ಈ ಸೇವನೆಯಲ್ಲಿ ಮಾತ್ರವಲ್ಲ, ಮಾರಾಟ ಜಾಲದಲ್ಲಿಯೂ ತೊಡಗಿರುವುದು ತಿಳಿದುಬಂದಿದೆ. ಇದರಿಂದ ಇಡೀ ಪರಿಸರದಲ್ಲಿಯೇ ಗಾಂಜಾ ಅಮಲು ನೆತ್ತಿಗೇರಿಬಿಟ್ಟಿದೆ.

ಪೊಲೀಸ್ ಇಲಾಖೆ ಕೆಲ ಸಂದರ್ಭಗಳಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದೆಯಾದರೂ ಮೂಲವಾಗಿ ಮಾರಾಟ ಮಾಡುವ ಕಿಂಗ್ ಪಿನ್ ಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗಾಂಜಾ ಗಿರಾಕಿಗಳಿಗೆ ಖುಷಿಯ ವಿಚಾರವಾಗಿದೆ. ಗಾಂಜಾ ಸೇವನೆ ಮಾಡಿ ಸಿಕ್ಕಿಬಿದ್ದ ಗಾಂಜಾ ಗಿರಾಕಿಗೆ ಠಾಣೆಯಲ್ಲಿಯೇ ಜಾಮೀನು ಸಹ ದೊರಕುತ್ತದೆ ಇಂತಹ ದುರ್ಬಲ ಕಾನೂನು ಗಾಂಜಾ ಸೇವಕರಿಗೆ ಭಯ ಇಲ್ಲದಂತಾಗಿಸಿದೆ  “ಇನ್ನೂ ಆದಷ್ಟು ಬೇಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲವಾದರೆ ಗಾಂಜಾ ಅಮಲಿಗೆ ಇಡೀ ಯುವಕರ ಪೀಳಿಗೆಯೇ ನಾಶವಾಗಬಹುದು” ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗಾಂಜಾ ಸೇವನೆಯಿಂದಾಗಿ ದೇಹಾರೋಗ್ಯ ಹಾನಿಯಷ್ಟೇ ಅಲ್ಲ, ಮಾನಸಿಕ ಅಸ್ಥಿರತೆ, ಒತ್ತಡ, ಕುಟುಂಬ ಜಗಳ, ಶಿಕ್ಷಣದಲ್ಲಿ ಆಸಕ್ತಿ ಕಡಿಮೆ ಇತ್ಯಾದಿ ಪರಿಣಾಮಗಳು ಸ್ಪಷ್ಟವಾಗಿವೆ.ಕೆಲವೊಮ್ಮೆ ಯುವಕರು ಕಾನೂನು ವಿರುದ್ಧ ನಡೆದು ಅಪರಾಧಗಳತ್ತ ಎಳೆಯಲ್ಪಡುವ ಸಂಭವವೂ ಹೆಚ್ಚು.

ಪೋಷಕರು ಹಾಗೂ ಹಿರಿಯ ನಾಗರಿಕರು ಗಾಂಜಾ ಮಾರಾಟದ ವಿರುದ್ಧ ಧ್ವನಿ ಎತ್ತಿದ್ದು, “ಮಕ್ಕಳನ್ನು ರಕ್ಷಿಸುವುದು ಒಟ್ಟಾರೆ ಸಮಾಜದ ಹೊಣೆಗಾರಿಕೆ” ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು, ಗಾಂಜಾ ಮಾರಾಟಗಾರರನ್ನು ಬಂಧಿಸಬೇಕು, ಸೇವಕರಿಗೆ ಉಚಿತ ಚಿಕಿತ್ಸಾ ನೆರವು ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆ.

ಇನ್ನೂ ಪಟ್ಟಣದ ನೂತನ ಪಿಎಸ್‌ಐ ರಾಜುರೆಡ್ಡಿ ಅನವಟ್ಟಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವ ಕಿರಾತಕರ ಹೆಡೆಮುರಿ ಕಟ್ಟಿದ್ದರು ಅದೇ ಮಾದರಿಯಲ್ಲಿ ರಿಪ್ಪನ್ ಪೇಟೆ ಠಾಣಾ ವ್ಯಾಪ್ತಿಯಲಿ ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟುವಲ್ಲಿ ಮುಂದಡಿಯಿಟ್ಟು ಠಾಣಾ ವ್ಯಾಪ್ತಿಯಲ್ಲಿ ಸುಸಂಸ್ಕೃತ ಸಮಾಜವನ್ನು ಮರು ಜೋಡಿಸಬೇಕಾಗಿದೆ.

ಈಗಲೇ ಕ್ರಮ ತೆಗೆದುಕೊಳ್ಳಿ, ನಾಳೆ ಕೈತಪ್ಪಬಹುದು!

ರಿಪ್ಪನ್ ಪೇಟೆಯ ಈ ಗಂಭೀರ ಸಮಸ್ಯೆ ಸುಸಂಸ್ಕೃತ ಸಮಾಜವನ್ನು ಹಾಳು ಮಾಡುತ್ತಿದೆ. ಇಡೀ ಸಮುದಾಯ, ಶಾಲೆಗಳು, ಪೋಷಕರು ಹಾಗೂ ಆಡಳಿತ ಯಂತ್ರ ಒಂದೇ ಹೆಜ್ಜೆಯಲ್ಲಿ ನಡೆಯದಿದ್ದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ತಡೆಗಟ್ಟಲಾಗದು. ಗಾಂಜಾ ವಿರುದ್ಧ ಕಠಿಣ ಹೋರಾಟಕ್ಕೆ ಇಂದಿನ ಆರಂಭವೇ ಉತ್ತಮ ನಾಳೆಗೆ ದಾರಿಯಾಗಿದೆ…

ಗಾಂಜಾ ಗಿರಾಕಿಗಳ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ನಮ್ಮ POSTMAN NEWS (9663420169) ಸಂಪರ್ಕಕ್ಕೆ ಬನ್ನಿ. ನಿಮ್ಮ ಧೈರ್ಯವಂತಿಕೆ ಸುಸಂಸ್ಕೃತ ಸಮಾಜವನ್ನು ರಕ್ಷಿಸಬಹುದು.

ಗಾಂಜಾ ಅಮಲು ತಡೆಗಟ್ಟಲು ಈ ಕೆಳಗಿನ ಕ್ರಮಗಳಿಂದ ಸಾದ್ಯವಿದೆ

1. ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ.

2. ಗಾಂಜಾ ಮಾರಾಟದ ಮಾಹಿತಿ ನೀಡುವವರಿಗೆ ಬಹುಮಾನ ಘೋಷಣೆ ಹಾಗೂ ಭದ್ರತೆ

3. ಪುನರ್ವಸತಿ ಕೇಂದ್ರ ಸ್ಥಾಪನೆ.

4. ಗ್ರಾಮಸ್ಥರೊಂದಿಗೆ ಪೊಲೀಸರ ಸಂವಹನ ಹೆಚ್ಚಳ.

5. ಸೋಶಿಯಲ್ ಮೀಡಿಯಾ ಹಾಗೂ ಸೈಬರ್ ತಂಡದ ನೆರವು ಮೂಲಕ ಮಾರಾಟದ ಜಾಲ ಭೇದನೆ.

6. ವಿದ್ಯಾರ್ಥಿಗಳಿಗೆ ಸಮರ್ಪಿತ ಮನೋವೈದ್ಯಕೀಯ ಸಹಾಯ ಕೇಂದ್ರ.

7. ಗ್ರಾಮ/ವಾರ್ಡ್ ಮಟ್ಟದಲ್ಲಿ ‘ಅಮಲು ವಿರೋಧಿ ಕಮಿಟಿ’ ಸ್ಥಾಪನೆ.

8. ಪೋಷಕರಿಗೆ ‘ಅಮಲು ಎಚ್ಚರಿಕೆ’ ಮಾರ್ಗದರ್ಶನದ ಬಗ್ಗೆ ಮಾಹಿತಿ

9. ಮಹಿಳಾ ಸಂಘಗಳು, ಯುವಕ ಮಂಡಳಿಗಳ ಸಹಭಾಗಿತ್ವದ ಹೋರಾಟ.

 ರಫ಼ಿ ರಿಪ್ಪನ್ ಪೇಟೆ