Headlines

ಶಾಲಾ ಆವರಣದಲ್ಲಿ ಕಿಡಿಗೇಡಿಗಳ ಎಣ್ಣೆ ಪಾರ್ಟಿ – ಗ್ರಾಮಸ್ಥರ ಆಕ್ರೋಶ , ಸ್ಥಳಕ್ಕೆ ಪಿಎಸ್‌ಐ ರಾಜುರೆಡ್ಡಿ ಭೇಟಿ

ಶಾಲಾ ಆವರಣದಲ್ಲಿ ಕಿಡಿಗೇಡಿಗಳ ಎಣ್ಣೆ ಪಾರ್ಟಿ – ಗ್ರಾಮಸ್ಥರ ಆಕ್ರೋಶ , ಸ್ಥಳಕ್ಕೆ ಪಿಎಸ್‌ಐ ರಾಜುರೆಡ್ಡಿ ಭೇಟಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳ ಕೃತ್ಯ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ನುಗ್ಗಿ ಶಾಲಾ ಕಟ್ಟಡದ ಒಳಗೆ ಕುಡಿಯುವ ‘ಎಣ್ಣೆ ಪಾರ್ಟಿ’ ಮಾಡಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯರ ಪ್ರಕಾರ, ಕಳೆದ ಹಲವು ದಿನಗಳಿಂದ ರಾತ್ರಿ ವೇಳೆ ಶಾಲೆ ಆವರಣದಲ್ಲಿ ಅನಾಮಿಕ ವ್ಯಕ್ತಿಗಳು ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡು ಬರುತ್ತಿತ್ತು. ಆದರೆ ಇತ್ತೀಚೆಗೆ ವಿಷಯ ತೀವ್ರ ಸ್ವರೂಪ ಪಡೆದು, ಅವರು ಶಾಲಾ ಕಟ್ಟಡದ ಒಳಗೆ ನುಗ್ಗಿ ಕುಡಿತ ಮಾಡಿರುವುದರಿಂದ ವಿದ್ಯಾರ್ಥಿಗಳ ಭದ್ರತೆ ಕುರಿತು ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ರಿಪ್ಪನ್ ಪೇಟೆ ಪಿಎಸ್‌ಐ ರಾಜುರೆಡ್ಡಿ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೋಷಕರೊಬ್ಬರು ಮಾತನಾಡಿ “ಇಲ್ಲಿ ನಮ್ಮ ಮಕ್ಕಳು ಓದುತ್ತಿದ್ದಾರೆ. ಇಂತಹ ಕೃತ್ಯಗಳು ಶಾಲೆಯ ಶಿಸ್ತು ಹಾಗೂ ಮಕ್ಕಳ ಭದ್ರತೆಗೆ ಅಪಾಯ ತರುತ್ತವೆ. ಕೆಲವರು ಕುಡಿದು ಗಲಾಟೆ ಸೃಷ್ಟಿಸಿದರೆ ಮಕ್ಕಳ ಮೇಲೆ ಮಾನಸಿಕ ಒತ್ತಡ ಬರುವ ಸಾಧ್ಯತೆ ಇದೆ.”

ಶಾಲಾ ಸಿಬ್ಬಂದಿಯೂ ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದು, ಸ್ಥಳೀಯ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ವಿಷಯವನ್ನು ಹತ್ತಿರದ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ.

ಪೋಷಕರು ಸ್ಥಳೀಯ ಅಧಿಕಾರಿಗಳಿಗೆ ಶಾಲಾ ಆವರಣದಲ್ಲಿ ಸಿಸಿಟಿವಿ ಕ್ಯಾಂಮೆರಾ ಸ್ಥಾಪನೆ, ರಾತ್ರಿಯ ವೇಳೆ ಕಾವಲುಗಾರರ ನೇಮಕ ಹಾಗೂ ಆವರಣ ಗೋಡೆ ಬಲಪಡಿಸುವಂತೆ ಮನವಿ ಮಾಡಿದ್ದಾರೆ.