ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !! ಏನಿದು ಸ್ಟೋರಿ.!?

ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !!? ಏನಿದು ಸ್ಟೋರಿ

‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಊಟವನ್ನೂ ಅರ್ಧಕ್ಕೆ ಬಿಟ್ಟು ಆತ ಹೋಗಿದ್ದ. ಆದರೆ, ವಾಪಸ್ ಬರಲೇ ಇಲ್ಲ! ಪ್ರೇಯಸಿಯ ಅಣ್ಣನೇ ಆತನನ್ನು ನೇರವಾಗಿ ಮತ್ತೆ ಬಾರದ ಲೋಕಕ್ಕೆ ಕಳುಹಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ.

ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು ತಂಗಿ ಮತ್ತು ತಾಯಿಯನ್ನು ಕರೆದುಕೊಂಡು ಸುತ್ತಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಇಂಥದ್ದೊಂದು ಕೃತ್ಯಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲ್ಲೂಕಿನ ಆನೂರು ಗ್ರಾಮ.

ಜನವರಿ 30 ರಂದು ಆನೂರು ಗ್ರಾಮದಲ್ಲಿ ಖಜೂರಿ ಗ್ರಾಮದ ರಾಹುಲ್ ಎಂಬ ಯುವಕನ ಕೊಲೆಯಾಗಿತ್ತು. ಕೊಲೆ ಮಾಡಿದ ನಂತರ ಯಾರಿಗೂ ಗೊತ್ತಾಗದಂತೆ ಹಂತಕ ಪೃಥ್ವಿರಾಜ್, ಸ್ನೇಹಿತನ ಬೈಕ್ ಮೇಲೆ ಶವ ಸಾಗಿಸಿ ಮಹಾರಾಷ್ಟ್ರದ ಸಾಂಗ್ವಿ ಬಳಿ ಬೆಣ್ಣೆತೋರಾ ಹಿನ್ನಿರಿನಲ್ಲಿ ಶವಕ್ಕೆ ದೊಡ್ಡ ಕಲ್ಲು ಕಟ್ಟಿ ಎಸೆದಿದ್ದ. ಆ ನಂತರ ಹಂತಕ ಪೃಥ್ವಿರಾಜ್, ಆತನ ಸಹೋದರಿ ಮತ್ತು ತಾಯಿ ಎಲ್ಲರೂ ಮಹಾಕುಂಭಮೇಳಕ್ಕೆ ಪ್ರಯಾಗ್​​ರಾಜ್​​ಗೆ ತೆರಳಿ ತಲೆ ಮರೆಸಿಕೊಂಡಿದ್ದರು. ಇತ್ತ ಮಗ ಮನೆಗೆ ಬರಲಿಲ್ಲ ಎಂದು, ಕೊಲೆಯಾದ ರಾಹುಲ್ ಕುಟುಂಬಸ್ಥರು ಆಳಂದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದೇ ರಾಹುಲ್ ಮತ್ತು ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿಯ ಲವ್ ಕಹಾನಿ!

ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಸಂತ್ರಸ್ತನ ಮೊಬೈಲ್ ಲೊಕೇಷನ್ ಟ್ರ್ಯಾಕ್ ಮಾಡಿದ್ದಾರೆ. ಆಗ, ಕೊಲೆಯ ಅಸಲಿತ್ತು ಪತ್ತೆಯಾಗಿದೆ.

ಅಂದಹಾಗೆ ಎ-1 ಆರೋಪಿ ಪೃಥ್ವಿರಾಜ್ ಸಹೋದರಿ ಭಾಗ್ಯವಂತಿ ಮತ್ತು ರಾಹುಲ್ ಖಜೂರಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಂತೆ. ಜನವರಿ 30 ರಂದು ರಾತ್ರಿ ಸುಮಾರು 8:30 ರ ವೇಳೆಗೆ ಭಾಗ್ಯವಂತಿ ರಾಹುಲ್​​ಗೆ ಕರೆ ಮಾಡಿ, ”ಮನೆಯವರು ಊರಿಗೆ ಹೋಗಿದ್ದಾರೆ. ಯಾರೂ ಇಲ್ಲ ಬಾ” ಎಂದು ಕರೆದಿದ್ದಾಳೆ. ಭಾಗ್ಯವಂತಿ ಕರೆಯ ಬೆನ್ನಲ್ಲೇ ರಾಹುಲ್ ಊಟ ಮಾಡುವುದನ್ನೂ ಬಿಟ್ಟು ಆನೂರು ಗ್ರಾಮಕ್ಕೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಏಕಾಏಕಿ ಭಾಗ್ಯವಂತಿ ಅಣ್ಣ ಪೃಥ್ವಿರಾಜ್ ಆಗಮಿಸಿದ್ದಾನೆ. ಭಾಗ್ಯವಂತಿ ಮತ್ತು ರಾಹುಲ್ ಒಟ್ಟಿಗೆ ಇರುವುದನ್ನು ಕಂಡು ರೊಚ್ಚಿಗೆದ್ದ ಪೃಥ್ವಿರಾಜ್ ತಂಗಿಗೆ ಬೈದು, ರಾಹುಲ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.

ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು, ಸುಳಿವು ಸಿಗಬಾರದು ಎಂದು ಸ್ನೇಹಿತನಿಗೆ ಕರೆ ಮಾಡಿ ಆತನ ಬೈಕ್​ನಲ್ಲಿಯೇ ರಾಹುಲ್ ಶವ ಇಟ್ಟುಕೊಂಡು ಹೋಗಿ ಬೆಣ್ಣೆತೋರಾ ಹಿನ್ನಿರಿನಲ್ಲಿ ಕಲ್ಲು ಕಟ್ಟಿ ಹಾಕಿ ಪರಾರಿಯಾಗಿದ್ದಾನೆ.

ಇಷ್ಟೆಲ್ಲ ಆದ ನಂತರ, ಸಹೋದರಿ ಭಾಗ್ಯವಂತಿ ಮತ್ತು ತಾಯಿ ಸೀತಾಬಾಯಿ ಜತೆಗೂಡಿ ಪೃಥ್ವಿರಾಜ್ ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ ಹೋಗಿದ್ದಾನೆ. ಪೊಲೀಸರಿಗೆ ಸುಳಿವೇ ಸೀಗಬಾರದು ಎಂದು ಮೊಬೈಲ್ ಕೂಡ ಬಳಸಿಲ್ಲ. ಪ್ರಯಾಗರಾಜ್, ಕಾಶಿ, ಅಯೋಧ್ಯೆ, ಪಂಢರಾಪುರ ಹೀಗೆ ಬೇರೆ ಬೇರೆ ಕಡೆ ಪುಣ್ಯಕ್ಷೇತ್ರಗಳಿಗೆ ಓಡಾಡುತ್ತ ತಲೆ ಮರೆಸಿಕೊಂಡಿದ್ದರು.

ತೀರ್ಥಯಾತ್ರೆಯ ಮಧ್ಯೆ, ಜಾಮೀನು ಪಡೆಯುವುದಕ್ಕಾಗಿ ವಕೀಲರನ್ನು ಭೇಟಿಯಾಗಲೆಂದು ಆರೋಪಿಗಳು ಊರಿಗೆ ಬಂದಿದ್ದಾರೆ. ಇದೇ ವೇಳೆ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ರಾಹುಲ್ ಕೊಲೆ ಸಂಬಂಧ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ಎಸ್​​ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಒಟ್ಟಿನಲ್ಲಿ ಲವ್, ಸೆಕ್ಸ್, ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ನಾಲ್ಕು ತಿಂಗಳ ಬಳಿಕ ಬಯಲಿಗೆಳೆದಿದ್ದಾರೆ. ಕೊಲೆ ಮಾಡಿ ಪಾಪ ತೊಳೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಆರೋಪಿಗಳು ಹೋಗಿದ್ದರೂ ಸಹ ಮಾಡಿದ ಪಾಪ ಅವರ ಕೈಬಿಡಲೇ ಇಲ್ಲ. ಸದ್ಯ ಆರೋಪಿಗಳು ಜೈಲುಪಾಲಾಗಿದ್ದಾರೆ.

Leave a Reply

Your email address will not be published. Required fields are marked *