ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್ ಅವಿನಾಶ್ ನ ಬರ್ಬರ ಹತ್ಯೆ
ಶಿವಮೊಗ್ಗ ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮನ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಮೇಲೆ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ.
ಹಳೇಬೊಮ್ಮನಕಟ್ಟೆಯ ಶೇಖರಪ್ಪ ಎಂಬುವವರ ಪುತ್ರ ಅವಿನಾಶ್ (32) ಕೊಲೆಗೀಡಾದವ.
ಅವಿನಾಶ್ 10 ವರ್ಷಗಳ ಹಿಂದೆ ನಡೆದ ರೌಡಿ ಶೀಟರ್ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ನಂತರ ನ್ಯಾಯಾಲಯ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೆರೋಲ್ ಮೇಲೆ ಅವಿನಾಶ್ ಈಚೆಗೆ ಮನೆಗೆ ಬಂದಿದ್ದನು ಎಂದು ತಿಳಿದುಬಂದಿದೆ.
ಕೊಲೆ ನಡೆದ ಸ್ಥಳದಲ್ಲಿ ಮದ್ಯದ ಬಾಟಲಿ ದೊರೆತಿದ್ದು, ತಡರಾತ್ರಿ ವರೆಗೆ ಪಾರ್ಟಿ ಮಾಡಿ ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹೈಕೋರ್ಟ್ ಜಾಮೀನಿನ ಮೇಲೆ ಒಂದು ವರ್ಷದ ಕೆಳಗೆ ಹೊರಗೆ ಬಂದಿದ್ದ ಅವಿನಾಶ್ ಕೊಲೆಯಾಗಿ ಶವವಾಗಿ ಬಿದ್ದಿದ್ದನ್ನ ಬೊಮ್ಮನ್ ಕಟ್ಟೆಯ ಕೆರೆ ಏರಿಯಾ ಮೇಲೆ ಓಡಾಡುವ ರೈತರು ವಿನೋಬ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
ರಾತ್ರಿ 9 ಗಂಟೆಗೆ ಊಟ ಮುಗಿಸಿಕೊಂಡು ಮನೆಯಿಂದ ಹೊರಗೆ ಹೋದಾಗ ವಾಪಾಸ್ ಆಗಿಲ್ಲ. ಸ್ಥಳದಲ್ಲಿ ಮಚ್ಚು ದೊರೆತಿದೆ ಎಂದು ತಂದೆ ಶೇಖರಪ್ಪ ಹೇಳಿದ್ದಾರೆ. ಊರಿನಲ್ಲಿ ಅವಿನಾಶ್ ಚೆನ್ನಾಗಿದ್ದ. ಸ್ನೇಹಿತರೊಂದಿಗೆ ಚೆನ್ನಾಗಿ ಬೆರೆಯುತಿದ್ದ ಎಂದು ಗ್ರಾಮಸ್ಥ ಶ್ರೀನಿವಾಸ್ ತಿಳಿಸಿದ್ದಾರೆ.
ಸ್ಥಳಕ್ಕೆ ಅಡಿಷನಲ್ ಎಷ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಡಿವೈಎಸ್ಪಿ ಸಂಜೀವ್ ಕುಮಾರ್, ವಿನೋಬನಗರ ಪಿಐ ಸಂತೋಷ್ ಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ತಂದೆಯ ಆಕ್ರಂಧನ ಮುಗಿಲು ಮುಟ್ಟಿದೆ.