ಸೈಬರ್ ವಂಚನೆ – ಗೋವಾ ಪೊಲೀಸರಿಂದ ಶಿವಮೊಗ್ಗದ ವ್ಯಕ್ತಿ ಅರೆಸ್ಟ್
ಶಿವಮೊಗ್ಗ: ಗೋವಾದ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ₹1.02 ಕೋಟಿ ಮೊತ್ತದ ಸೈಬರ್ ವಂಚನೆ ಪ್ರಕರಣದಲ್ಲಿ ಶಿವಮೊಗ್ಗ ಮೂಲದ 63 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೃಷ್ಣಮೂರ್ತಿ ಎನ್ನುವವನಾಗಿದ್ದಾನೆ.
‘ASK Smart Prospect Y5’ ಎಂಬ ನಕಲಿ ಆನ್ಲೈನ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ಮೂಲಕ ಗೋವಾ ಮೂಲದ ವ್ಯಕ್ತಿಗೆ ವಂಚಿಸಿದ್ದಾರೆ ಎನ್ನಲಾಗಿದೆ.ಈ ಪ್ಲಾಟ್ಫಾರ್ಮ್ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ, ಒಲ್ಡ್ ಗೋವಾದ ಒಬ್ಬರಿಂದ ₹1,02,42,325 ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಲಾಗಿದೆ ಎಂಬ ದೂರಿನನ್ವಯ ಗೋವಾ ಪೊಲೀಸರು ಶಿವಮೊಗ್ಗಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಗೋವಾದಲ್ಲಿ ದೊಡ್ಡ ಸೈಬರ್ ವಂಚನೆ
20 ಮೇ 2025ರಂದು ದಾಖಲಾದ ದೂರಿನ ಆಧಾರದ ಮೇಲೆ, ಸೈಬರ್ ಕ್ರೈಂ ಪೊಲೀಸರು BNS ಮತ್ತು IT Actನ ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಹಣದ ಟ್ಯಾಂಜಾಕ್ಷನ್ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ಪೊಲೀಸರು, ಕೃಷ್ಣಮೂರ್ತಿಯನ್ನು ಶಿವಮೊಗ್ಗದಲ್ಲಿ ಗುರುತಿಸಿ ಅವರನ್ನು ಬಂಧಿಸಿದರು. ತನಿಖೆ ತಂಡದ ನೇತೃತ್ವವನ್ನು LPSI ಯಶಿಕಾ ಸಾಂಕೋವಾಲ್ಕರ್ ವಹಿಸಿದ್ದರು, ಮತ್ತು PI ದೀಪಕ್ ಪೆಡ್ನೇಕರ್ ಹಾಗೂ SP ರಾಹುಲ್ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ವಂಚನೆಯ ವಿವರಗಳು :
ತನಿಖೆಯಲ್ಲಿ ಆರೋಪಿಯು ತಮ್ಮ ವೈಯಕ್ತಿಕ ಖಾತೆಗೆ ₹5 ಲಕ್ಷ ಸ್ವೀಕರಿಸಿದ್ದು, ಅದನ್ನು ಇತರ ಸಹಯೋಗಿಗಳಿಗೆ ವರ್ಗಾಯಿಸಿದ್ದು ಬೆಳಕಿಗೆ ಬಂದಿದೆ. ಇದಲ್ಲದೆ, ಅವರು “ಬಪ್ಪಾ ಮೆಷಿನ್ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿ ಕರೆಂಟ್ ಅಕೌಂಟ್ ತೆರೆದಿದ್ದರು. ಈ ಕಂಪನಿಯು ಮೂರು ರಾಜ್ಯಗಳಲ್ಲಿ ₹6.5 ಕೋಟಿ ಮೊತ್ತದ 5 ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದೆ ಎಂದು ಪತ್ತೆಯಾಗಿದೆ.
SP ರಾಹುಲ್ ಗುಪ್ತಾ ಅವರು ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಅತಿಯಾದ ಲಾಭದ ಭರವಸೆ ನೀಡುವ ಆನ್ಲೈನ್ ಸ್ಕೀಮ್ಗಳ ಬಗ್ಗೆ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.