ನಿವೃತ್ತಿ ದಿನವೇ ಲೋಕಾಯುಕ್ತ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಇಂಜಿನಿಯರ್

ಶಿವಮೊಗ್ಗ : ಜಾಹೀರಾತು ಫಲಕಗಳ ನಿರ್ವಹಣೆ ಮೊತ್ತದ ಬಿಡುಗಡೆಗೆ ಗುತ್ತಿಗೆ ಸಂಸ್ಥೆಯಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದ ಇಲ್ಲಿನ ಸ್ಮಾರ್ಟ್ ಸಿಟಿ ಸಂಸ್ಥೆಯ ಚೀಫ್ ಎಂಜಿನಿಯರ್ ಎಂ.ಕೃಷ್ಣಪ್ಪ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದ ಎಕ್ಸ್‌ಟ್ರೀಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 2019ರಲ್ಲಿ ಸ್ಮಾರ್ಟ್ ಸಿಟಿ ಸಂಸ್ಥೆಯಿಂದ ನಗರದಲ್ಲಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್ ಜಾಹೀರಾತಿಗೆ ಟೆಂಡರ್ ಪಡೆದುಕೊಂಡು ಕೆಲಸ ಮುಗಿಸಿ ಐದು ವರ್ಷ ಕಾಲ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ.
ಆ ಪೈಕಿ ಏಳು ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳ ಎರಡು ತ್ರೈಮಾಸಿಕ ಅವಧಿಯ ನಿರ್ವಹಣೆಯ ಮೊತ್ತ ₹11,16,100 ಬಿಲ್ ಪಡೆಯುವುದು ಬಾಕಿ ಇದ್ದು, ಅದನ್ನು ಕೊಡಲು ಎಂ.ಕೃಷ್ಣಪ್ಪ ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಎಕ್ಸ್‌ಟ್ರೀಮ್ ಮೀಡಿಯಾ ಸಂಸ್ಥೆಯ ಎಕ್ಸಿಕ್ಯೂಟಿವ್ ಸೈಟ್ ಎಂಜಿನಿಯರ್ ಎಂ.ಎಸ್.ಪವನ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಗರದ ಸ್ಮಾರ್ಟ್ ಸಿಟಿ ಕಚೇರಿ ಮುಂಭಾಗದ ಆವರಣದಲ್ಲಿ ಎಂ.ಕೃಷ್ಣಪ್ಪ ಲಂಚದ ಮೊತ್ತವನ್ನು ಪವನ್ ಅವರಿಂದ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದ ತಂಡ ಹಣದ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.


