ಉಗ್ರರ ದಾಳಿ ಖಂಡಿಸಿ ಮುಸ್ಲಿಂ ಬಾಂಧವರಿಂದ ಪ್ರತಿಭಟನೆ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಮೇಲಿನ ನರಮೇಧವನ್ನು ಖಂಡಿಸಿ ರಿಪ್ಪನ್‌ಪೇಟೆಯ ಜುಮ್ಮಾ ಮಸೀದಿ ಮತ್ತು ಮಕ್ಕಾ ಮಸೀದಿಯ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಎರಡು ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ನೂರಾರು ಮುಸ್ಲಿಂ ಬಾಂಧವರು ಹೊಸನಗರ ರಸ್ತೆಯ ಮಸೀದಿಯಿಂದ ಮೆರವಣಿಗೆ ಹೊರಟು ವಿನಾಯಕ ವೃತ್ತದವರಗೆ ಬಂದು ಸಭೆ ನಡೆಸಿ ತಕ್ಷಣ ಇಂತಹ ಹೀನ ಕೃತ್ಯ ಎಸಗಿದವರನ್ನು ಬಂಧಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಮುಖಂಡರಾದ ಅರ್ ಎ ಚಾಬುಸಾಬ್ ಧರ್ಮದ ಹೆಸರು ಕೇಳಿ ನರಮೇಧ ನಡೆಸಿದ ಕೃತ್ಯದಿಂದಾಗಿ ಮುಸ್ಲಿಂ ಸಮಾಜ ತಲೆ ಎತ್ತದಂತೆ ಮಾಡಿದ್ದಾರೆಂದು ಹೇಳಿ, ಇಂತಹ ಹೀನಕೃತ್ಯ ಎಸಗಿದವರನ್ನು ಜೀವಂತ ಉಳಿಸಬಾರದು ಅವರಿಗೂ ಇಂತಹದೇ ಕಠಿಣ ಶಿಕ್ಷೆಯಾಗಬೇಕು ಇಂತಹ ನೀಚ ಕೃತ್ಯಕ್ಕೆ ಸಹಕರಿಸುವ ಪಾಕಿಸ್ಥಾನಕ್ಕೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಉತ್ತರ ನೀಡಬೇಕಾಗಿದೆ ಹಾಗೇಯೇ ಈ ಸಂಧರ್ಭದಲ್ಲಿ ದೇಶವಾಸಿಗಳೆಲ್ಲಾ ಜಾತಿ ಧರ್ಮ ಹಾಗೂ ರಾಜಕೀಯವನ್ನು ಬದಿಗಿಟ್ಟು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಬೇಕಾಗಿದೆ ಎಂದರು.
ಭಾರತ ದೇಶ ಶಾಂತಿ ಸೌಹಾರ್ದತೆಯ ದೇಶ ನಾವುಗಳಲ್ಲಾ ಶಾಂತಿ ಸೌಹಾರ್ದತೆಯಿಂದ ಯಾವುದೇ ಜಾತಿ ಭೇದ-ಭಾವನೆಯಿಲ್ಲದೆ ಭಾವೈಕ್ಯತೆಯಿಂದ ನಡೆದುಕೊಂಡು ಬರುತ್ತಿದ್ದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನರಮೇಧ ಎಸಗುವ ಮೂಲಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಮೀರ್ ಹಂಜಾ ಹೇಳಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕೆಡಿಪಿ ಸದಸ್ಯ ಆಸೀಪ್ ಭಾಷಾ ಮಾತನಾಡಿ ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಸಹಕರಿಸುವ ಶತ್ರು ರಾಷ್ಟ್ರ ಪಾಕಿಸ್ಥಾನವನ್ನು ಸದೆಬಡಿಯುವಲ್ಲಿ ಕೇಂದ್ರ ಸರ್ಕಾರ ಮುಂದಡಿ ಇಡುವ ಮೂಲಕ ತಮ್ಮದಲ್ಲದ ತಪ್ಪಿಗೆ ಜೀವವನ್ನು ಕಳೆದುಕೊಂಡ ಅಮಾಯಕ ಜೀವಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ, ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ, ಆಸಿಫ್‌ಭಾಷಾ,ಅಶ್ವಕ್ , ಖಲೀಲ್‌ಷರೀಫ್, ನಿಸಾರ್‌ಸುಮಯ್ಯ, ಅಜಾದ್, ಮೆಕ್ಕಾ ಮಸೀದಿ ಧರ್ಮಗುರುಗಳು ಹಾಗೂ ಮುಸ್ಲಿಂ ಸಮಾಜದ ಇನ್ನಿತರರು ಹಾಜರಿದ್ದರು.