ರಾಬರ್ಟ್ ವಾದ್ರಾನಿಗೆ ಗುಂಡಿಕ್ಕಿ ಕೊಲ್ಲಿ: ಶಾಸಕ ಚೆನ್ನಬಸಪ್ಪ ವಿವಾದಾತ್ಮಕ ಹೇಳಿಕೆ

ಶಿವಮೊಗ್ಗ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಉಗ್ರವಾದಿಗಳಿಗೆ ಶಕ್ತಿ ತುಂಬುವ ಹೇಳಿಕೆ ನೀಡಿದ್ದಾರೆ. ಅವರನ್ನು ಬಂಧಿಸಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕು ಎಂದು ಶಿವಮೊಗ್ಗದ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಉಗ್ರವಾದಿಗಳ ಗುಂಡಿನ ದಾಳಿಯಲ್ಲಿ ಮಡಿದವರಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಸಮಯದಲ್ಲಿ ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ, ಉಗ್ರವಾದಿಗಳಿಗೆ ಶಕ್ತಿ ತುಂಬುವ ಹೇಳಿಕೆ ನೀಡಿರುವ ರಾಬರ್ಟ್ ವಾದ್ರಾ ಒಬ್ಬ ದೇಶ ದ್ರೋಹಿ. ಆತ ಭೂಮಿಯ ಮೇಲೆ ಇರಲು ನಾಲಾಯಕ್ಕು ಆದ್ದರಿಂದ ಮೊದಲಿಗೆ ಆತನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದೇನೆ. ನರಮೇಧ ನಡೆಯುತ್ತಿರುವ ಈ ಹೊತ್ತಿನಲ್ಲಿ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ’ ಎಂದು ಎಸ್.ಎನ್. ಚನ್ನಬಸಪ್ಪ ಎಂದು ಹೇಳಿದರು.
ಪಾಕಿಸ್ತಾನಕ್ಕೆ ಬಾಂಬ್ ಹಾಕಿ, ಭಾರತ ಮಾತೆಗೆ ಹೂವು ಹಾಕಿ ಎಂಬುದು ಕೇವಲ ಘೋಷಣೆಯಾಗಬಾರದು. ಇದು ಕಾರ್ಯಾಗತ ಆಗಬೇಕು. ಇಡೀ ಭಾರತದ ಜನಮಾನಸದ ಬೇಡಿಕೆಯಾಗಿದೆ ಎಂದು ಹೇಳಿದರು.
ಉಗ್ರರ ದಾಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಕಂಬನಿ ಮಿಡಿಯುವ ಜೊತೆಗೆ ಭದ್ರತಾ ವೈಫಲ್ಯ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿವೆ. ಇದು ಖಂಡನೀಯ. ಈ ರೀತಿಯ ಮಾಡುವುದು ದೇಶದ್ರೋಹದ ಕಾರ್ಯ ಎಂದು ಕಿಡಿಕಾರಿದರು.
ಈ ಹಿಂದೆ ಭದ್ರತಾ ವೈಫಲ್ಯ ಆಗಿಲ್ವ ಎಂದು ಪ್ರಶ್ನಿಸಿದ ಅವರು, ಭಾರತದ ತಾಕತ್ತು ಇಡೀ ಜಗತ್ತಿಗೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಗ್ರರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಭಯೋತ್ಪಾದನೆ ಮಟ್ಟ ಹಾಕುವ ನಿರ್ಧಾರ ಕೈಗೊಂಡಿದೆ. ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಂಡಿದೆ. ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಕೈಗೊಂಡಿರುವ ನಿಲುವಿಗೆ ನೆರೆ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಕೆ.ಎನ್.ಜಗದೀಶ್, ಎನ್.ಜೆ.ನಾಗರಾಜ್, ಮಂಜುನಾಥ್ ಉಪಸ್ಥಿತರಿದ್ದರು.