ಹಳ್ಳಿಕೆರೆಯಲ್ಲಿ ಮೀನು ಬೇಟೆ ಸಂಭ್ರಮ

ಸೊರಬ: ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ಹಳ್ಳಿಕೆರೆಯಲ್ಲಿ ಮಂಗಳವಾರ ಮೀನು ಬೇಟೆ ಸಂಭ್ರಮದಿಂದ ಜರುಗಿತು. ಗ್ರಾಮಸ್ಥರು ಹಿರಿಯರು, ಕಿರಿಯರೆನ್ನದೆ ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದರು.
ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕಿನಲ್ಲಿ ಕೆರೆ ಬೇಟೆ ವಿಶೇಷವಾಗಿ ನಡೆಯುತ್ತದೆ. ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕ ಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುವುದನ್ನು ನೋಡಲು ನೂರಾರು ಜನ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ವೇಳೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಡಗರ.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿ ಹಾಗೂ ಜರಡಿ ಬಲೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವೇ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೂ ಕೆಲ ಗ್ರಾಮಸ್ಥರು ತಮ್ಮ ಸಂಬಂಧಿಗಳನ್ನು ಕೆರೆಗೆ ಇಳಿಸಿ ಮೀನುಗಳನ್ನು ಹಿಡಿದರು. ಕೆಲವರಿಗೆ ಸುಮಾರು ೫ಕೆ.ಜಿ ವರೆಗೆ ಮೀನು ಲಭಿಸಿದರೆ, ಕೆಲವರು ಚಿಕ್ಕ ಮೀನುಗಳನ್ನು ಹಿಡಿದು ತೃಪ್ತಿಪಟ್ಟುಕೊಂಡರು.
ವಿಶೇಷವೆಂದರೆ, ಬಿದರಿನ ಕೂಣಿಯ ಜಾಗದಲ್ಲಿ ಕಬ್ಬಿಣದ ಕೂಣಿಗಳು ಸಹ ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.