ಕನ್ನಡ ಚಿತ್ರರಂಗದ ಹಾಸ್ಯ ದಿಗ್ಗಜ ಬ್ಯಾಂಕ್ ಜನಾರ್ಧನ್ ನಿಧನ
ಕನ್ನಡದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (76) ಅವರು ನಿಧನರಾಗಿದ್ದಾರೆ.

ಎ.13 ರ ರವಿವಾರ ಮಧ್ಯರಾತ್ರಿ ಸುಮಾರು 2.30ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು.
1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್ ಆಪರೇಟರ್ ಆಗಿ ಕೆಲಸ ನಿರ್ವಹಿಸಿದರು. ಜೊತೆಗೆ ನಾಟಕಗಳಲ್ಲಿಯೂ ಬಣ್ಣ ಹಚ್ಚಿ ನಟಿಸುತ್ತಿದ್ದರು. ಒಮ್ಮೆ ಹೊಳಲ್ಕೆರೆಗೆ ಬಂದಿದ್ದ ಧೀರೇಂದ್ರ ಗೋಪಾಲ್ ಅವರು ಇವರ ನಾಟಕಗಳನ್ನು ನೋಡಿ ಬೆಂಗಳೂರಿಗೆ ಬರುವಂತೆ ಚಲನಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದರು. ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದು ಧೀರೇಂದ್ರ ಗೋಪಾಲ್ ಅವರನ್ನು ಭೇಟಿ ಮಾಡಿದರು. ನಂತರದ ದಿನಗಳಲ್ಲಿ ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಅವರಿಗೆ ಬಾಡಿಗಾರ್ಡ್ ಪಾತ್ರ ಮಾಡಿದರು.
1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿ ಚಿತ್ರರಂಗದಲ್ಲಿ ಉತ್ತುಂಗಕ್ಕೇರಿದರು. ಸುಮಾರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾತ್ರಿ 2.30ರ ಸುಮಾರಿಗೆ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.
1949ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು. 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. 2016ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆಯಕ್ಟೀವ್ ಆಗಿರಲಿಲ್ಲ. 2022ರ ‘ಮಠ’ ಹಾಗೂ 2023ರ ‘ಉಂಡೇನಾಮ’ ಚಿತ್ರದಲ್ಲಿ ಅವರು ನಟಿಸಿದ್ದರು.
ಹೆಸರು ಬಂದಿದ್ದು ಹೇಗೆ?
ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲೂ ಕೂಡ ಕಾರಣವಿದೆ. ಜನಾರ್ಧನ್ ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಕಲೆಯ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳನ್ನು ಮಾಡಿಕೊಂಡಿದ್ದರು. ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ಇಂಪ್ರೆಸ್ ಆದರು. ಬೆಂಗಳೂರಿಗೆ ಬರುವಂತೆ ಅವರು ಹೇಳಿದ್ದರು.
ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದರು. ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಬಾಡಿಗಾರ್ಡ್ ಪಾತ್ರ ಮಾಡಿದರು. ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದರು. ಜನಾರ್ಧನ್ ಅವರು ಸುಮಾರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾಟಕಗಳಿಂದ ಆರಂಭ ಆದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಅವರು ಆರಂಭದಲ್ಲಿ ಚಿತ್ರರಂಗದಲ್ಲಿ ಸಮಯ ಕಳೆದರು. ನಂತರದ ದಿನಗಳಲ್ಲಿ ಅವರಿಗೆ ದೊಡ್ಡ ದೊಡ್ಡ ಆಫರ್ಗಳು ಬರೋಕೆ ಆರಂಭ ಆದವು. ಅವರು ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು.