ಜನಮೆಚ್ಚುಗೆ ಗಳಿಸಿದ ರಿಪ್ಪನ್‌ಪೇಟೆಯ ಅಜಿತ್ ಸಿಂಹ ನಟನೆಯ ಏರಿಸೀಮೆ ಕಿರುಚಿತ್ರ
ಏರಿಸೀಮೆ ಕಿರುಚಿತ್ರ ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತಿದ್ದು ಮಲೆನಾಡಿನ ಯುವ ಪ್ರತಿಭೆ ಅಜಿತ್ ಸಿಂಹ ಅದ್ಬುತ ನಟನೆಗೆ ಯಾರು ತುಟಿಕ್ ಪಿಟಿಕ್ ಅನ್ನುವಂತಿಲ್ಲ. ಅಷ್ಟರಮಟ್ಟಿಗೆ ಕಿರುಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಸತ್ಯ ರಾಧಕೃಷ್ಣರವರ ಸಂಗೀತ ನೋಡುಗರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಮತ್ತು ಚಿತ್ರದೊಂದಿಗೆ ಬೆಸೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಆಹಾನ್ ಆ್ಯಕ್ಷನ್ ಕಟ್ ಹೇಳಿರುವ ‘ಏರಿಸೀಮೆ’ಯಲ್ಲಿ ಅಜಿತ್ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸೋನಾಲಿ ಸುರೇಶ್ ,ಉದಯ್ ಕುಮಾರ್ ,ಅಜಯ್ ಸಿ ಎಂ ,ರಮೇಶ್ ಬೆಣಕಲ್ ,ಶ್ರೀವಾತ್ಸವ ಬೈರಿ ಮತ್ತು ಗುರು ತಾರಾಬಳಗದಲ್ಲಿದ್ದಾರೆ.ರಿಪ್ಪನ್‌ಪೇಟೆ ರಾಘವೇಂದ್ರ ಬೇಕರಿಯ ಮಾಲೀಕ ಸುರೇಶ್ ನಿರ್ಮಾಣದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಏರಿಸೀಮೆ ಕಿರುಚಿತ್ರದ ನಿರ್ದೇಶಕ ಅಹಾನ್ ಅವರ ಕಥೆ ಹಾಗೂ ನಿರ್ದೇಶನ ಹಾಗೂ ಡೈಲಾಗ್ ಎಲ್ಲದರ ನಿರೂಪಣೆ ಶೈಲಿಯೇ ಪ್ರೇಕ್ಷಕ ವೃಂದದವರಿಗೆ ತುಂಬಾ ಇಷ್ಟವಾಗಿದೆ ಎನ್ನಬಹುದು.. ಏಕೆಂದರೆ ಈ ಕಿರು ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬೇಕಾಗಿರುವ ಎಲ್ಲಾ ಸರಕುಗಳನ್ನು ನಾವು ಕಾಣಬಹುದು. ಇದರಲ್ಲಿ ಎಮೋಷನ್ಸ್ ಕೇಳುವವರಿಗೆ ಅಣ್ಣ ತಂಗಿಯ ಎಮೋಷನ್ಸ್ , ಟ್ವಿಸ್ಟ್ ಕೇಳುವವರಿಗೆ ಟ್ವಿಸ್ಟ್ , ಹಳ್ಳಿಯೊಂದರ ಮುಗ್ದ ವ್ಯಕ್ತಿಯ ಮುಗ್ದತೆಯೊಳಗಿನ ಆಕ್ರೋಶ ಎಲ್ಲವೂ ಕೂಡ ಈ ಏರಿಸೀಮೆ ಕಿರುಚಿತ್ರದಲ್ಲಿ ಕಾಣಬಹುದು.
ಇನ್ನು ಟೈಟಲ್ ವಿಚಾರಕ್ಕೆ ಬಂದರೆ ‘ಏರಿಸೀಮೆ’ ಚಿತ್ರ ನೋಡುವಾಗ ನನಗನಿಸಿದ್ದು ಬಲಹೀನ ವ್ಯಕ್ತಿಯೊಬ್ಬ ತಾನು ಸರ್ವಸ್ವವೇ ಎಂದುಕೊಂಡ ತನ್ನ ತಂಗಿಯನ್ನು ಪ್ರಭಾವಿ ವ್ಯಕ್ತಿಯೊಬ್ಬ ಅದೊಂದು ನಿರ್ಜನ ಪ್ರದೇಶ(ಏರಿಸೀಮೆ)ದಲ್ಲಿ ತನ್ನ ತೃಷೆಗಾಗಿ ಬಳಸಿಕೊಂಡು ಆನಂತರ ಹತ್ಯೆಗೈದಿರುವ ಸನ್ನೀವೇಶವನ್ನು ನಿರ್ದೇಶಕ ಅಹಾನ್ ತನ್ನದೇ ಶೈಲಿಯಲ್ಲಿ ಪ್ರಸ್ತುಪಡಿಸಿದ್ದಾರೆ.
ಚಿತ್ರದ ಮೊದಲಿಗೆ ನಟ ಅಜಿತ್ ಸಿಂಹ ಮನೆಯಿಂದ ಹೊರಡುವಾಗ ಕೊಡ್ತಿದ್ದ ಎಕ್ಸಪ್ರೆಷನ್ , ಮನೆ ಮುಂಭಾಗ ಚಪ್ಪಲಿಯೊಂದು ಉಲ್ಟಾ ಬಿದ್ದಿರುವ ಸೀನ್ ನಿರ್ದೇಶಕ ಏನನ್ನೋ ಹೇಳಹೊರಟಿದ್ದಾನೆ ಅನ್ನಿಸುತ್ತೆ, ಆನಂತರ ಕಥೆಯ ಎಳೆ ಎಳೆಯನ್ನು ತುಂಬಾ ಅರ್ಥಪೂರ್ಣವಾಗಿ ಜೋಡಿಸಿದ್ದಾರೆ.
ಇನ್ನೂ ಈ ಕಿರುಚಿತ್ರದ ಮೈನಸ್ ಪಾಯಿಂಟ್ ಹೇಳಬೇಕೆಂದರೆ ಪಾತ್ರಗಳ ನಡುವಿನ ಸಂಭಾಷಣೆ ಸ್ವಲ್ಪ ಕಡಿಮೆ ಆಯಿತೆನೋ ಅನಿಸುತ್ತೆ ಹಾಗೇ ಮೊದಲ 8 ನಿಮಿಷ ಒಳ್ಳೆ BGM ಹಾಗೂ ಸತ್ಯ ರಾಧಕೃಷ್ಣ ಸಂಯೋಜಿಸಿದ ಸುಮಧುರ ಹಾಡು ಇದ್ದರೂ ಯಾಕೋ ಕಾಯುವಿಕೆ ಸ್ವಲ್ಪ ಜಾಸ್ತಿಯಾಯ್ತಿನೋ ಅನ್ನಿಸುತ್ತೆ..ಆ ಕಾಯುವಿಕೆಯಲ್ಲಿಯೇ ಪ್ಲಾಷ್ ಬ್ಯಾಕ್ ತೋರಿಸಿದ್ದರೆ ಇನ್ನೂ ಚೆನ್ನಾಗಿರುತಿತ್ತು.. ಇನ್ನೂ ಖಳನಟ ಹಾಗೂ ತಂಗಿ ಪಾತ್ರಧಾರಿಯ ಸ್ವಲ್ಪ ಸಂಭಾಷಣೆ ಇದ್ದಿದ್ದರೆ ಇನ್ನೂ ಚೆನ್ನಾಗಿ ಪುಷ್ ಕೊಡುತಿತ್ತು ಎಂದನಿಸುತ್ತದೆ.
ಈ ಕಿರುಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲೂ ಅಜಿತ್ ಸಿಂಹ ಎಂಬ ಯುವ ಪ್ರತಿಭೆಯನ್ನು ಪರದೆ ಮೇಲೆ ಅದ್ಭುತವಾಗಿ ತೋರಿಸಲು ಸಿನಿಮಾಟೋಗ್ರಫಿ, ಸಂಗೀತ, ಸಂಕಲನದ ಕೊಡುಗೆ ಮಹತ್ವದ್ದು.ಈ ಸಂಧರ್ಭದಲ್ಲಿ ಅಜಿತ್ ಸಿಂಹ ನಟನೆ ಬಗ್ಗೆ ಹೇಳಲೇಬೇಕು ಇನ್ಸ್ಟಾಗ್ರಾಮ್ ನಲ್ಲಿ ಪ್ರತಿಭಾನ್ವಿತ ಕಂಟೆಂಟ್ ಕ್ರಿಯೇಟರ್ ರಲ್ಲಿ ಒಬ್ಬರಾದ ಅಜಿತ್ ಸಿಂಹ, ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಖಡಕ್ ಅಭಿನಯದಿಂದ ಸಾಕಷ್ಟು ಅಭಿಮಾನಿ , ಬೆಂಬಲಿಗರನ್ನು ಹೊಂದಿದ್ದಾರೆ.ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ನಟನೆಯ ಮೇಲಿರುವ ಆಸಕ್ತಿ.ಕೊನೆಯದಾಗಿ ಒಳ್ಳೆಯ ಅವಕಾಶ ಸಿಕ್ಕರೆ ಸ್ವಾಂಡಲ್ ವುಡ್ ನಲ್ಲಿ ಅದ್ಬುತ ನಟನಾಗಿ ಮಿಂಚುವ ಎಲ್ಲಾ ಅರ್ಹತೆ ಅಜಿತ್ ಸಿಂಹ ರವರಿಗೆ ಇದೆ… ಶುಭವಾಗಲಿ…
ವಿಮರ್ಶೆ – ರಫ಼ಿ ರಿಪ್ಪನ್‌ಪೇಟೆ