ಪಾಕ್ ವಿರುದ್ಧ ಕೊಹ್ಲಿ “ವಿರಾಟ” ರೂಪ – ಭಾರತಕ್ಕೆ ಭರ್ಜರಿ ಜಯ !
ದುಬೈ : ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ-ಪಾಕಿಸ್ತಾನದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಸೋಲಿಸಿ, ಭರ್ಜರಿ ಜಯ ಗಳಿಸಿದೆ.
ಪಾಕಿಸ್ತಾನ ನೀಡಿದ 242 ರನ್ ಗಳ ಬೆನ್ನಟ್ಟಿದ ಭಾರತವು ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದಿಂದ ಪಾಕಿಸ್ತಾನಕ್ಕೆ ‘ಹೈಬ್ರಿಡ್’ ಪ್ರದರ್ಶನ ನೀಡಿತು.
ಭಾರತಕ್ಕೆ ಜಯಗಳಿಸಲು ಎರಡು ರನ್ ಬೇಕಿದ್ದಾಗ, ಕೊಹ್ಲಿಗೆ ಶತಕ ಪೂರೈಸಲು 4 ರನ್ ಅಗತ್ಯವಿತ್ತು. ಆಗ ವಿರಾಟ್ ದರ್ಶನ ನೀಡಿದ ಕೊಹ್ಲಿ ಬಾಲ್ ಅನ್ನು ಬೌಂಡರಿ ಗೆ ಎತ್ತಿ ಶತಕ ಪೂರೈಸಿದರು. ತಂಡವನ್ನು ಗೆಲ್ಲಿಸಿ ಭರ್ಜರಿ ಮನರಂಜನೆ ನೀಡಿದರು. ತಾನು ಕಿಂಗ್ ಕೊಹ್ಲಿ ಎನ್ನುವುದನ್ನು ಸಾಬೀತು ಪಡಿಸಿದರು.
ಇಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನಿಂಗ್ಸ್ ಆರಂಭದಿಂದಲೇ ಸ್ಥಿರ ಪ್ರದರ್ಶನ ನೀಡಿದ ಪಾಕ್ ಆಟಗಾರರು ಉತ್ತಮ ಆರಂಭ ಪಡೆದುಕೊಂಡರು.ಆದ್ರೆ ನಂತರದಲ್ಲಿ ಭಾರತೀಯ ಬೌಲರ್ ಗಳು ಪಾರಮ್ಯ ಮೆರೆದಿದ್ದು 49.4 ಓವರ್ ಗಳಲ್ಲಿ 241 ರನ್ ಗಳಿಗೆ ಪಾಕಿಸ್ತಾನ ಸರ್ವ ಪತನ ಕಂಡಿತು.
ಭಾರತದ ಪರವಾಗಿ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್, ಇನ್ನುಳಿದಂತೆ ಹರ್ಷಿತ್ ರಾಣಾ , ಅಕ್ಷರ್ ಪಟೇಲ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಪರವಾಗಿ ಸೌದ್ ಶಕೀಲ್ 62 ಮತ್ತು ಅಕ್ಸರ್ 46 ರನ್ ಬಾರಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು.
ಪಾಕಿಸ್ತಾನದ ಈ ಟಾರ್ಗೆಟ್ ಬೆನ್ನತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಉತ್ತಮ ಅಡಿಪಾಯ ಹಾಕಿಕೊಟ್ಟರು.ಆದ್ರೆ 20 ರನ್ ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮಾ, ಅಫ್ರಿದಿ ಬೌಲಿಂಗ್ ನಲ್ಲಿ ಬೋಲ್ಡ್ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು.ಆ ನಂತರ ಜೊತೆಯಾದ ಗಿಲ್ ಮತ್ತು ಕೊಹ್ಲಿ ಉತ್ತಮ ಇನಿಂಗ್ಸ್ ಕಟ್ಟಿಕೊಟ್ಟರು.
ಆದ್ರೆ 46 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗಿಲ್ ಅಬ್ರಾರ್ ಅಹ್ಮದ್ ಸ್ಪಿನ್ ಬಾಲ್ ಗೆ ಕ್ಲೀನ್ ಬೋಲ್ಡ್ ಆದರು. ಆ ನಂತರ ಜೊತೆಗೂಡಿದ ಕೊಹ್ಲಿ & ಶ್ರೇಯಸ್ ಅಯ್ಯರ್ ಜೋಡಿ ತಾಳ್ಮೆಯ ಆಟ ಪ್ರದರ್ಶಿಸಿದರು. ವಿರಾಟ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ ಅಕ್ಷರಶಃ ಪಾಕ್ ಬೌಲರ್ ಗಳನ್ನು ಕಾಡಿದರು. ಈ ಜೋಡಿಯ ಜೊತೆಯಾಟ ಭಾರತವನ್ನು ಗೆಲುವಿನ ದಿಕ್ಕಿಗೆ ಕೊಂಡೊಯ್ಯಿತು.