ಅಡಿಕೆ ಬೆಳೆಗಾರರಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗುಡ್ ನ್ಯೂಸ್
ಅಡಿಕೆ ಆಮದು ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಕೆಗೆ ವೈಜ್ಞಾನಿಕ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಬೆಳೆಗೆ ತಕ್ಕಂತೆ ಬೆಲೆ ನೀಡಬೇಕಿದ್ದು, ಬೆಳೆ ಹಾನಿಯಾದಾಗ ಪರಿಹಾರ ನೀಡಬೇಕು. ರೈತರು ಬೆಳೆದ ಬೆಳೆಗೆ ಸರಿಯಾದ ಹಣ ಸಿಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂತೆ ಮಾಡಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.
ಭಾರತವು ವಿಶ್ವದ ಅತಿದೊಡ್ಡ ಅಡಿಕೆ ಉತ್ಪಾದಕ ರಾಷ್ಟ್ರ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಡಿಕೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅಡಿಕೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ನಡವಳಿಕೆಯ ಸಂಕೇತವಾಗಿದೆ. ಮೋದಿ ಸರ್ಕಾರ ಅಡಿಕೆ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇರುವುದರಿಂದ ಇಲ್ಲಿಗೆ ಬನ್ನಿ ಎಂದು ಹೇಳಿದ್ದಾರೆ. ನಾನು ಯಾವುದೇ ಪಕ್ಷದ ನಾಯಕನಾಗಿ ಇರಲಿ ಬಂದಿಲ್ಲ. ಕೇಂದ್ರ ಸಚಿವನಾಗಿ ಗರ್ವದಿಂದ ಬಂದಿಲ್ಲ. ನಿಮ್ಮ ಸೇವೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಪ್ರತಿ ಮನೆಯಲ್ಲಿಯೂ ಅಡಿಕೆ ಬಳಸುತ್ತೇವೆ. ಪೂಜೆಯ ಸಂದರ್ಭದಲ್ಲಿ ಅಡಿಕೆ ಗಣೇಶನಾಗಿ ದೇವರಾಗಿ ಬದಲಾಗುತ್ತದೆ. ಅಡಿಕೆಯ ಉಪಯೋಗ ಬಹಳಷ್ಟು ಇದೆ ಎಂದು ಹೇಳಿದ್ದಾರೆ.
ಅಡಿಕೆಗೆ ಬಾಧಿಸುವ ರೋಗಗಳ ತಡೆ ಸಂಶೋಧನೆಗೆ ತಂಡ ರಚಿಸಲಾಗುವುದು. ಇದಕ್ಕಾಗಿ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುವುದು. ಅಡಿಕೆಯನ್ನು ಹಿಂದಿನಿಂದಲೂ ಬಳಕೆ ಮಾಡುತ್ತಿದ್ದಾರೆ. ಅಡಿಕೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವದಂತಿ ಇದೆ. ಆದರೆ ಹಿಂದಿನಿಂದಲೂ ಜನ ಅಡಿಕೆಯನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಸಿ ವರದಿ ಸಲ್ಲಿಕೆಗೆ 16 ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಅಡಿಕೆಯಿಂದ ಯಾವುದೇ ಸಮಸ್ಯೆ ಇಲ್ಲ. ಅಡಿಕೆ ಕುರಿತಾದ ಇಂತಹ ವದಂತಿಗಳನ್ನು ದೂರ ಮಾಡಲಾಗುವುದು ಎಂದು ಹೇಳಿದ್ದಾರೆ.

