ಮೈಕ್ರೊ ಫೈನಾನ್ಸ್, ಸಾಲ ಪಡೆದವರ ನೆರವಿಗೆ ಹೆಲ್ಪ್‌ಲೈನ್: ಡಿ ಕೆ ಶಿವಕುಮಾರ್
ದಬ್ಬಾಳಿಕೆ ಮೂಲಕ ಸಾಲ ವಸೂಲಿ ಮಾಡುವ ಅಧಿಕಾರ ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಗೆ ಇಲ್ಲ. ಸಾಲ ಪಡೆದವರ ನೆರವಿಗೆ ರಾಜ್ಯ ಸರ್ಕಾರ ಈಗಾಗಲೇ ಸಹಾಯವಾಣಿ ಆರಂಭಿಸಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ಶಿವಮೊಗ್ಗಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಕುಟುಂಬಗಳು ಮೈಕ್ರೊ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದಿವೆ. ಸಾಲಗಾರರಿಗೆ ಕಿರುಕುಳ ನೀಡಿ ಹಣ ವಸೂಲಿ ಮಾಡಲು ಅವಕಾಶ ಇಲ್ಲ. ಆ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲೂ ಆರ್‌ಬಿಐ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಮೆಟ್ರೊ ಪ್ರಯಾಣ ದರ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೇಂದ್ರ ಸರ್ಕಾರ ನೇಮಿಸಿದ ತಾಂತ್ರಿಕ ಸಮಿತಿಯೇ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದೆ. ಇದು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಅಲ್ಲ’ ಎಂದರು.
‘ಕನ್ನಡ ಪರ ಹೋರಾಟಗಾರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಾನು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದೆ. ಸಂಬಂಧಪಟ್ಟ ಸಂಘಟನೆಯವರು ಈ ಬಗ್ಗೆ ಅರ್ಜಿ ಸಲ್ಲಿಸಲಿ. ಅದನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.


